You are here
Home > ಪುಟ ೨ > ಆಷಾಡ ಗಾಳಿ-ಶ್ರಾವಣ ಮಳೆ-ನೆನಪಿನ ಬುತ್ತಿ

ಆಷಾಡ ಗಾಳಿ-ಶ್ರಾವಣ ಮಳೆ-ನೆನಪಿನ ಬುತ್ತಿ

ಬೀಸುತಿದೆ ತಂಗಾಳಿ, ಮನದಾಳದ ನೆನಪುಗಳ ಮೆಲುಕು ಹಾಕುವಲ್ಲಿ ಸಹಕರಿಸುತ|

ಆಷಾಡ ಗಾಳಿಯ ರಭಸಕ್ಕೆ ಬೀಳುವ ಎಲೆಗಳು, ಸಾರುತಿವೆ ನಾ ಬಿಟ್ಟು ಬಂದ ನಂಟನ್ನು|

ವಾಲುವ ಬಳ್ಳಿ-ಹುಲ್ಲುಗಳು ನೆನಪಿಸುತಿವೆ, ನಾ ಸಹಿಸಿ ಸಾಗಿ ಬಂದ ಹಾದಿಯನ್ನು|

ಮರ ಬಿಟ್ಟು ಮಣ್ಣಿಗೆ ಬಿದ್ದು ನಗುತಿರುವ ಹೂಗಳು, ತರಿಸುತಿವೆ ನನ್ನೊಳಗೊಂದು ಮಂದಹಾಸವನ್ನು||

 

ಇಳೆಗೆ ತಂಪನೆರೆಯುವ ಮಳೆಯ ಸೂಚನೆ ನೀಡುತಿವೆ ಪಕ್ಷಿಗಳ ಕಲರವವು|

ಪಂಚಮ ಮಾಸದಾಗಮನದ ಕಾತರ ಈ ಮನಸಿಗೆ, ವರ್ಷ ಋತುವಿನಲ್ಲಿ ಮಿಂದೇಳಲು|

ಎಂದೂ ಮಾಸದ ನೆನಪಿನ ಬುತ್ತಿಯ ಬಿಚ್ಚಿ, ಈ ಮಳೆಯಲ್ಲಿ ತೊಯ್ದಾಡಲು||

 

ಮುಂಗಾರು-ಹಿಂಗಾರು ಪರಿವೆಯೇ ಬೇಡ, ಈ ಶ್ರಾವಣ ವರ್ಷಕ್ಕೆ, ಗಾಳಿ-ಮಳೆಯ ಸಂಭ್ರಮ ಸಂಬಂಧಕ್ಕೆ|

ನೀರೆರೆಯುತ, ಹಸಿರ ಮೈ ತೊಳೆಯುತ, ಭುವಿಯ ಮಣ್ಣಿಗೆ ಘಮಲು ನೀಡುತ, ನವಿಲ ನಾಟ್ಯದ ಸಂಗವ ಬಯಸುತ|

ಹನಿ-ಹನಿಯಾಗಿ ಬೀಳುತಿವೆ ಆಗಸದಿಂದ ಆ ಬಿಂದುಗಳು, ಮುತ್ತನಿಡಲು ಈ ಧರಣಿಗೆ||

 

ವರುಷಗಳೇ ಕಳೆದರೂ, ಮನದ ಮೂಲೆಯಲ್ಲಿ ಮರೆಯಾಗಿದ್ದ|

ನೆನಪುಗಳು ತೊಯ್ದುಬಿಡುತ್ತವೆ, ಈ ವರ್ಷದ ರಭಸಕ್ಕೆ, ಕಣ್ಣ ಹನಿಗೂ ಜಾಗ ಕೊಡದೆ|

ತಂಗಾಳಿಯೇನು, ಬಿರುಗಾಳಿಗೂ ಆಗದು, ಈ ನೆನಪುಗಳ ಭಾರವನ್ನು ಹಗುರಾಗಿಸಿ ನನ್ನಿಂದ ಬೇರ್ಪಡಿಸಲು|

ಓ ನೆನಪುಗಳೇ, ನೀವೆಷ್ಟು ಭಾರ, ಆದರೆ ಅಷ್ಟೇ ಸುಮಧುರ, ಈ ಗಾಳಿ-ಮಳೆಯ ಬೆಸುಗೆಯಂತೆ||

ಕಲ್ಪನಾ ಲೋಕ
writings from kalpa shree

Leave a Reply

Top