You are here
Home > ಪುಟ ೧ > ದೈವ ನಡೆ

ದೈವ ನಡೆ

ಭಾಗ ೧ (ಭಾಗ ೨ ಬರಹದ ನಡುವೆ ಇದೆ.)

ಜಂಬೆಟ್ಟು ಎಂದು ಕರೆಯಿಸಿಕೊಳ್ಳುವ ಆ ಎತ್ತರದ ಬೆಟ್ಟ ಪ್ರದೇಶದ ಇತಿಹಾಸ ವಾಟ್ಸಪ್ಪು ಎನ್ನುವ ಮಾರಿಗೆ ಸೊಪ್ಪು ಹಾಕುವ ಮಂದಿಗೆ ತಿಳಿದಿರುವುದು ಅಸಾಧ್ಯವಾದ ಮಾತು. ಈಗಿಂದ ಸುಮಾರು ೩೦೦-೪೦೦ ವರುಷಗಳ ಹಿಂದಿನ ಮಾತು. ಜಂಬೆಟ್ಟಿನ ಆಸುಪಾಸಿನ ನೂರು ಎಕರೆ ಜಾಗದಜಮೀನ್ದಾರಿಕೆ ಮಾಡುತ್ತಿದ್ದುದು ಅಪ್ಪಣ್ಣ ಶೆಟ್ಟಿ. ಪೋರ್ಚುಗೀಸರ ದಬ್ಬಾಳಿಕೆ, ಬಲವಂತದ ಮತಾಂತರಗಳಿಂದ ಬೆಂಡಾದ ಗೋವಾದ ಒಂದಷ್ಟು ಬುಡಕಟ್ಟು ಜನಾಂಗ ಉಡುಪಿ ಕಡೆ ವಲಸೆ ಬಂದಿತ್ತು. ಕೆಲವಷ್ಟು ಜನ ಜೈನ ರಾಜರಲ್ಲಿ ಆಶ್ರಯ ಬೇಡಿದರು. ಇನ್ನು ಕೆಲವರು ಅಪ್ಪಣ್ಣ ಶೆಟ್ಟಿಯಂತಹ ಜಮೀನ್ದಾರರ ಅಡಿಯಲ್ಲಿ ಕೂಲಿ ಕೆಲಸಕ್ಕೆ ಸೇರಿ ಅಲ್ಲೇ ಜೀತದಾಳಾಗಿ ಬಿಟ್ಟರು.

ಶೆಟ್ಟರ ಜಾಗದ ಫಸಲು ಬಹಳ ಚೆನ್ನಾಗಿಯೇ ಬರುತ್ತಿತ್ತು. ಅವರ ಕುಟುಂಬದವರು ನಂಬಿಕೊಂಡು ಬಂದಿದ್ದ ಜಂಬೆಟ್ಟಿನ ನಾಗ- ಶೆಟ್ಟರ ಮನೆ, ಬೆಳೆ, ಗೋವುಗಳನ್ನು ಕಾದ ಕರುಣಿ. ನಾಗನ ಪೂಜೆ ಮಾಡುವ ಅನಂತ ಭಟ್ಟರು,ಬಹಳ ಭಕ್ತಿ-ನಿಷ್ಠೆಯಿಂದ ದೇವರಉಪಾಸನೆ ಮಾಡುತ್ತಿದ್ದರು. ಊರ ಜನ ಪ್ರೀತಿಯಿಂದ ’ಅನಂತಯ್ಯ’ ಎಂದೇ ಕರೆಯುತ್ತಿದ್ದರು. ಶೆಟ್ಟರು ದೇವರ ಪೂಜೆಗೆ ಪ್ರತಿಯಾಗಿ ಭಟ್ಟರಿಗೆ ಅಕ್ಕಿ-ತೆಂಗಿನಕಾಯಿ ಕೊಡುತ್ತಿದ್ದರು. ಶೆಟ್ಟರು ಏನೇ ಆದರೂ ದಿನಂಪ್ರತಿ ನಡೆವ ಪೂಜೆಗೆ ಸ್ವತಃ ಹಾಜರಾಗಿ ಮತ್ತೆಯೇ ಬೆಳಿಗ್ಗೆಯ ತಿಂಡಿ ತಿನ್ನುತ್ತಿದ್ದುದು.

ಶೆಟ್ಟರಿಗೆ ಒಬ್ಬನೇ ಮಗ ಗಿರೀಶ. ಅಪ್ಪನ ಮುದ್ದು ಹೆಚ್ಚಾಗಿ, ಏನೂ ಕೆಲಸವನ್ನೂ ಮಾಡದೆ ಆಲಸಿಯಾಗಿಯೇ ಬೆಳೆದ. ಜಮೀನ್ದಾರಿಕೆ ಇದೆ ಎಂಬ ಅಹಂ ಬೇರೆ!. ಜಂಬೆಟ್ಟಿನ ನಾಗ ನೆಲೆಯಾದದ್ದು ಬೆಟ್ಟದ ತುದಿಯಲ್ಲಿ. ಇತ್ತೀಚಿಗೆ ಶೆಟ್ಟರಿಗೆ ಕೂಡುತ್ತಿಲ್ಲವಾದ್ದರಿಂದ ಪೂಜೆಯ ಸಲುವಾಗಿ ತಮ್ಮ ಮಗನನ್ನು ಕಳುಹಿಸುತ್ತಿದ್ದರು. ಗಿರೀಶನಿಗೆ ದೇವರಲ್ಲಿ ಅಷ್ಟೇನೂ ಭಕ್ತಿ ಇರಲಿಲ್ಲ. ಇತ್ತೀಚಿಗೆ ಸ್ವಲ್ಪ ಹೆಂಡದ ಗೀಳನ್ನು ಹೊಂದಿದ್ದ ಗಿರೀಶ ಬೆಳಿಗ್ಗೆ ಬಹಳ ತಡವಾಗಿಯೇ ಏಳುತ್ತಿದ್ದ.ಇನ್ನು ಪೂಜೆಗೆ ಹೋಗುವ ಮಾತು ಕಷ್ಟ ಸಾಧ್ಯವೇ ಸರಿ. ಇವನನ್ನು ಕಾದು ಹೈರಾಣಾಗುತ್ತಿದ್ದ ಅನಂತಯ್ಯ ಪೂಜೆ ಮುಗಿಸಿ ಹೊರಡುತ್ತಿದ್ದರು.

ಒಂದು ದಿನ ಗಿರೀಶ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಭಟ್ಟರ ಮನೆಗೆ ಹೋಗಿ-

“ಅನಂತಯ್ಯ..ಹೋಜ್ಜ..ಹೋಯ್..ಮನೆಯಂಗೆ ಇದ್ದ್ ರ್ಯ?”

http://www.tecnorado.com/?master-thesis-proofreader ಭಟ್ಟರು– “ಹೋ.. ಶೆಟ್ಟ್ರೆ.. ಎಂತ?”

http://autofem.com/?dissertations-on-cctv-online ಗಿರೀಶ– ” ಇಗ ಅಪ್ಪಯ್ಯನ ಹೆಣ ನಾಗಂಗೆ ತನು ಹಾಕ್ ಅಂದಳಿ ಬಾಳೆಕೊನೆ ಕೊಟ್ಟಿತ್ ಎಂತ ಕಂಡ್ ಮಾಡಿ.”

get link ಭಟ್ಟರು– “ಅಯ್ಯೋ..ಶೆಟ್ಟ್ರೆ.. ನಾಳೆ ಬನ್ನಿ..ಮಾಡುವ.ಈಗ ನಂದು ಊಟ ಆಯಾಯ್ತು. ಉಂಡ್ರ್ ಮೇಲೆ ನಾ ನಾಗನ್ನ ಮುಟ್ಟುದಿಲ್ಲೆ.”

go here ಗಿರೀಶ– “ಏ ಭಟ್ಟ.. ಅದೆಲ್ಲ ನಂಗೊತ್ತಿಲ್ಲೆ. ನಿಂಗೆ ಉಂಬುಕೆ ಕೂಳ್ ಕೊಡುದ್ ನಾವೆ ಅಲ್ದ.. ಮಾಡ.. ಪೂಜೆ..”

http://passieforchocolate.com/?help-writing-a-dissertation ಭಟ್ಟರು-“ಆತ್ತಿಲ್ಲ. ಶೆಟ್ಟ್ರೆ..”

ಗಿರೀಶ ಸಿಟ್ಟಿನಿಂದ-“ಇಡೀ ಊರಿಗೆ ನೀವೊಬ್ರೇ ಭಟ್ನಾ? ಪೂಜೆ ಮಾಡುಕೆ ಆಯ್ದಿರ್ ಮೇಲೆ ಆ ಜನಿವಾರ ಎಂತಕ್ಕೆ ನಿಮ್ಗೆ. ನಂಗೆ ಕೊಡಿ. ಅದ್ನ ಹಾಯ್ಕಂಡ ಪೂಜೆ ನಾ ಮಾಡ್ತಿ” ಎನ್ನುತ್ತಾ ಭಟ್ಟರ ಮೈ ಮೇಲಿದ್ದ ಜನಿವಾರಕ್ಕೆ ಕೈ ಹಾಕಿ ತುಂಡು ಗೈದ. ಬಾಳೆಗೊನೆಯನ್ನು ನಾಗನ ತಲೆಯ ಮೇಲೆ ಎಸೆದು ಹೋದ. ತಮ್ಮ ಕಣ್ಣೆದುರೇ ನಡೆದ ಅಪಚಾರವನ್ನು ಸಹಿಸಿ ಕೊಳ್ಳದ ಭಟ್ಟರು ನಾಗನಿಗೆ ಕೈ ಮುಗಿದು ಯಾರಿಗೂ ಹೇಳದೆ ಊರು ಬಿಟ್ಟರು.

ನಾಗನಿಗೆ ನಡೆದ ಅಪಚಾರವನ್ನು ತಿಳಿಯದ ಅಪ್ಪಣ್ಣ ಶೆಟ್ಟರು, ಭಟ್ಟರಿಗೆ ತಾವು ಕೊಟ್ಟ ಭಕ್ಷೀಸು ಸಾಲದೇ ಬಿಟ್ಟರು ಎಂದುಕೊಡರು. ಬಹಳವೇ ದಕ್ಷಿಣೆ ಕೊಡುವೆನೆಂದು ಹೇಳಿ ಪಕ್ಕದ ಊರಿನ ಗೋಪಾಲ ಭಟ್ಟರನ್ನ ಪೂಜೆಗೆ ಕರೆಸಿಕೊಂಡರು. ಗಿರೀಶನು ಅಲ್ಪಕಾಲದ ಅನಾರೋಗ್ಯದಿಂದ ತೀರಿಕೊಂಡನು. ತನ್ನ ಕಣ್ಣೆದುರಿಗೇ ಮಗನ ಸಾವಿನ ದುಃಖ ಸಹಿಸದ ಶೆಟ್ಟರು, ನಾಗನ ದರ್ಶನ ಸೇವೆ ನಡೆಸಿದರು. ನಾಗ ತನಗೆ ಆದ ಅಪಚಾರಕ್ಕೆ ಬಲಿ ಪಡೆದೆ ಎಂದು ಸತ್ಯ ಹೇಳಿತು. ನಿನ್ನ ತಂಗಿಯ ಮಗನನ್ನು ದತ್ತು ತೆಗೆದುಕೊಂಡು ಜಮೀನ್ದಾರಿಕೆ ನಡೆಸು.ನನ್ನ

ಪೂಜೆ ನಿಷ್ಠೆಯಿಂದ ಮಾಡಿದರೆ ಒಳ್ಳೆಯದನ್ನೇ ಮಾಡುತ್ತೇನೆ ಎಂದು ನಾಗನ ಪಾತ್ರಿಯ ಬಾಯಿಂದ ನುಡಿ ಬಂತು.ಊರಿನ ಜನ ನಾಗನ ಕಾರ್ಣಿಕವನ್ನು ಕೊಂಡಾಡಿದರು.

ಎಲ್ಲಿ ದುಡ್ಡು ಜಾಸ್ತಿ ಬರುತ್ತದೋ ಅಲ್ಲಿ ದಾಹ ಜಾಸ್ತಿ ಇರಬೇಕು. ಸ್ವಲ್ಪದಿನಗಳ ಕಾಲ ಭಕ್ತಿಯಿಂದ ಪೂಜೆ ಮಾಡಿದ ಗೋಪಾಲ ಭಟ್ಟರು, ತಮ್ಮ ಕೈಲಿರುವ ದುಡ್ದಿನ ಮಹಿಮೆಯಿಂದ ಬುದ್ಧಿಹೀನರಾದರು. ಪರಸತಿ ಸಂಗ ಶುರುಮಾಡಿದರು. ಅದೇ ಮೈಲಿಗೆಯಲ್ಲಿ ನಾಗನನ್ನು ಮುಟ್ಟಿದರು. ನಾಗ ಬಿಟ್ಟಾನೆಯೇ? ಭಟ್ಟರಿಗೆ ಕುಷ್ಠ ರೋಗ ಬಂದಿತು. ಪೂಜೆಯನ್ನು ಬಿಟ್ಟುಬಿಟ್ಟರು. ನಾಗನ  ಕೋಪಕ್ಕೆ ಬೆದರಿದ ಶೆಟ್ಟರು ಮಂಗಳೂರಿಂದ ಸೀತಾರಾಮ ಭಟ್ಟರನ್ನು ತಂದು ಪೂಜೆಗೆ ಇಡಿಸಿದರು.

ಸೀತಾರಾಮ ಭಟ್ಟರು ಕೇರಳದಿಂದ ಸಕಲ ವೇದ-ಪಾಂಡಿತ್ಯ ಪಡೆದುಬಂದವರಾಗಿದ್ದರು. ಅವರು ಬಂದ ಮೇಲೆ ಊರಿನಲ್ಲಿ ಒಳ್ಳೆಯ ಮಳೆ-ಬೆಳೆ ಒದಗಿ ಬಂತು. ಭಟ್ಟರಿಗೆ ಬಾರದ ಪೂಜೆ ಪುನಸ್ಕಾರಗಳಿಲ್ಲ. ಪಕ್ಕದ ಊರಿನ ಜನರಿಗೂ ಇವರೇ ಬೇಕು. ನಾಗನ ಪೂಜೆಯಲ್ಲೂ ಎಳ್ಳಿನಿತೂ ಲೋಪ ಮಾಡಿದವರಲ್ಲ. ಒಳ್ಳೆಯ ಫಸಲು ಬಂದುದರಿಂದ ಸಂತೋಷಗೊಂಡ ಅಪ್ಪಣ್ಣ ಶೆಟ್ಟರ ದತ್ತು ಮಗ ಸತೀಶ, ಬೆಟ್ಟದ ಮೇಲಿನ ನಾಗನಿಗೆ ಮೆಟ್ಟಿಲು ಮಾಡಿಸುವ ಸೇವೆ ಕೊಟ್ಟ.ಗುಡ್ಡದ ಮಣ್ಣನ್ನು ಹದ ಮಾಡಿ, ಏರು-ತಗ್ಗನ್ನು ಸರಿ ಮಾಡುವ ಕಾರ್ಯ ಭರದಿಂದ ಸಾಗುತ್ತಿತ್ತು.

ಗುಡ್ಡವನ್ನು ಸರಿ ಮಾಡುವ ಕಾರ್ಯದಲ್ಲಿ ಸುಕ್ರ ನಾಯ್ಕನೂ ಇದ್ದ. ಏರು ಜವ್ವನದ ನಾಯ್ಕ ಕೆಲಸ ಮಾಡುವುದರಲ್ಲಿ ಒಂದು ಕೈ ಮೇಲೆ. ಅವನ ಅಪ್ಪ ಗೋವದಿಂದ ವಲಸೆಬಂದದಿನಿಂದ ಶೆಟ್ಟರ ಮನೆಯಲ್ಲೇ ಬೀಡು ಬಿಟ್ಟವ. ನಾಗನ ಪೂಜೆ ಮಾಡಲು ಹೋಗುತ್ತಿದ್ದ ಸೀತಾರಾಮ ಭಟ್ಟರು ಭಕ್ತಿಯಿಂದ ಮಂತ್ರವನ್ನು ಪಠಿಸುತ್ತಾ ಹೋಗುವುದು ಅವರ ನಿತ್ಯದ ಕಾಯಕ. ಸುಕ್ರನಿಗೆ ಆ ಮಂತ್ರದಲ್ಲಿ ಆಸಕ್ತಿ. ದಿನಾಲೂ ಕೇಳುವ ಮಂತ್ರವನ್ನು ಮೆಲುಕು ಹಾಕಿ ಕಲಿತೇ ಬಿಟ್ಟ. ಒಂದು ದಿನ ಸೀತಾರಾಮ ಭಟ್ಟರ ಎದುರು ಚೂರೂ ತಪ್ಪಿಲ್ಲದೇ ಆ ಸಂಸ್ಕೃತದ ಮಂತ್ರವನ್ನು ಪಠಿಸಿದಾಗ ಭಟ್ಟರ ಎದೆ ಜಲ್ಲೆನಿಸಿತು.

ಭಟ್ಟರು– “ನಾಯ್ಕ ಹೇಗೆ ಕಲಿತೆ ಈ ಮಂತ್ರ?”

go site ನಾಯ್ಕ-“ಭಟ್ರೇ..ನೀವ್ ದಿನಾ ಪೂಜೆ ಮಾಡುಕೆ ಹೋಪತಿಗೆ ನಾ ಕೆಲ್ಸ ಮಾಡ್ತಾ ಕೇಂಡ್ ಕಲ್ತದ್ದು”

ಭಟ್ಟರು -“ಬರೀ ನಾಯ್ಕ ಅದ್ರೂ ಸಂಸ್ಕೃತದ ಮಂತ್ರ ಹೇಳುವದು ನಿನ್ನ ಪೂರ್ವ ಜನ್ಮದ ಸುಕೃತ ಫಲ”

source url ನಾಯ್ಕ– “ಹಾಂಗೆಂತ ಇಲ್ಯೇ.. ನಾ ದಿನ ಉರಗ ಅಂದಳಿ ಓಂದು ಸೊಪ್ಪು ಬತ್ತಲ ಅಯ್ಯ..ಅದೇ ತಿಂಬುದು.ಅದ್ನ ತಿಂದ್ರೆ ನೆನ್ಪಿನ ಶಕ್ತಿ ಜಾಸ್ತಿ ಅಂಬ್ರ್..”

ಭಟ್ಟರು – “ಹ್ಮ್….” ಎಂದು ನಕ್ಕು ವಾಪಾಸ್ಸಾದರು.

ಭಟ್ಟರಿಗೆ  ಎಲ್ಲಿಲ್ಲದ ಚಿಂತೆ ಶುರುವಾಯಿತು. ತನಗೆ ಬರುವ ಎಷ್ಟೊಂದು ಪೂಜೆ-ಪುನಸ್ಕಾರಗಳು ಪಕ್ಕದೂರಿನ ಭಟ್ಟರಿಗೂ ತಿಳಿದಿಲ್ಲ. ಅಂತದ್ದರಲ್ಲಿ ಕೇವಲ ಈ ಕುಡುಬಿ ಜಾತಿಯ ನಾಯ್ಕನಿಗೆ ತನ್ನ ಮಂತ್ರಗಳು ತಿಳಿದರೆ ತನ್ನ ಘನತೆ ಏನಾದೀತು ಎಂದು ಯೋಚನೆ ಮಾಡಿದರು. ೧೮ ಶತಮಾನ ಪುರೋಹಿತಶಾಹಿ ಜನಾಂಗ ಕೆಳವರ್ಗದ ಜನರನ್ನು ದಮನಿಸಿದ ಕಾಲ. ಅದಕ್ಕೆ ಸಾಕ್ಷಿ ಎಂಬಂತೆ ಭಟ್ಟರು ನಾಯ್ಕನನ್ನು ಮುಟ್ಟುವುದು ಬಿಡಿ, ಅವನ ನೆರಳು ಹಾದರೂ ಸ್ನಾನ ಮಾಡುತ್ತಿದ್ದರು. ಕೊನೆಗೂ ಏನೋ ಉಪಾಯ ಮಾಡಿದರು. ನಾಯ್ಕನಿಗೆ ಉರಗ(ಬ್ರಾಹ್ಮಿ) ಸೊಪ್ಪಿನ ಬದಲಾಗಿ ತೊಂಡೆಕಾಯಿ ತಿನ್ನಲು ಹೇಳಿದರು. ತಿಂದರೆ ಮತ್ತಷ್ಟು ಮಂತ್ರ ನೆನೆಪಿಡಬಹುದು ಎಂದರು.

ಮತ್ತೊಂದು ದಿನ ನಾಯ್ಕ ಸಿಕ್ಕಾಗ,

ಭಟ್ಟರು -” ನಾಯ್ಕ.. ಈಗ ಮಂತ್ರ ಹೇಳು ನೋಡುವ”

ನಾಯ್ಕ ಮಂಡೆ ಗಿಂಡುತ್ತಾ-“ನಂಗೆ ತೊಂಡಿ ಕಾಯಿ ತಿಂದಲ್ಲಿಂದ ಮಂತ್ರ ಹಂಬ್ಲೇ ಆತಿಲ್ಲ.. ಅಯ್ಯ..”

ಭಟ್ಟರು – “ಅದು ನಾಗನ ಮಂತ್ರ.. ನೀನು ಕುಡುಬಿ ಅದ್ಕೆ.. ದೇವ್ರು ನೆನ್ಪಿಗೆ ಕೊಡ್ತಿಲ್ಲ..” ಎಂದು ಹೇಗೋ ಮರೆ ಮಾಚಿಸಿದರು.

ನಾಯ್ಕ ಹೌದೇನೋ ಎಂದು ತಲೆ ಅಲ್ಲಾಡಿಸಿ ಸುಮ್ಮನಾದ. ಭಟ್ಟರಿಗೆ ಏನೋ ಖುಷಿ. ನಾಯ್ಕನ ಮೇಲೆ ಪ್ರಯೋಗಿಸಿದ ತೊಂಡೆಕಾಯಿ ಎಂದೂ ನೆನಪಿನ ಶಕ್ತಿಯನ್ನು ಹೆಚ್ಚಿಸುವುದಾಗಿರಲಿಲ್ಲ. ಅದು ಮರೆವನ್ನು ತರುವುದಾಗಿತ್ತು.

ಮಳೆಗಾಲ ಶುರುವಾಗುವಾಗ ಬೆಟ್ಟಕ್ಕೆ ಮೆಟ್ಟಿಲುಮಾಡುವ ಕಾರ್ಯ ಸಂಪೂರ್ಣ ಮುಗಿಯಿತು. ಸತೀಶ ಶೆಟ್ಟರು ನಾಗನಿಗೆ ಪೂಜೆ ಮಾಡಿಸಿ ಊರಿಗೆಲ್ಲಾ ಊಟ ಹಾಕಿಸಿದ. ನಾಗ ತಾನು ಸಂತುಷ್ಟನಾಗಿರೆವೆನೆಂದು ನುಡಿಯಿತು. ಜನರೂ ಸಂತುಷ್ಟರಾದರು. ಮಳೆಗಾಲದಲ್ಲಿ ಬೆಟ್ಟಹತ್ತಿ ನಾಗನನ್ನು ಕಾಣುವ ಭಾಗ್ಯ ಎಲ್ಲರಿಗೂ ಸಿಗದು. ಬೆಟ್ಟದ ಮೇಲಿಂದ ನೋಡಿದರೆ ಕಣ್ಣಿಗೊಂದು ಹಬ್ಬ. ಕೆಳಗಿನಿಂದ ಮೆಲುವಾಗಿ ಬೀಸುವ ತೆಂಗು-ಕಂಗುಗಳು. ಹಚ್ಚ-ಹಸಿರಿನಿಂದ ನಳನಳಿಸುವ ಭತ್ತದ ಪೈರು. ಮೇಲೆ ನಿಂತು ಕಾಯುವ ನಾಗ. ಜಂಬೆಟ್ಟೆಂಬ ಊರಿಗೆ ಮತ್ತೇನು ಬೇಕು!!

ಸೀತಾರಮ ಭಟ್ಟರ ಹೆಸರು ಈಗ ಅನೇಕ ಊರಿಗೆಲ್ಲ ಪರಿಚಿತ. ಎಲ್ಲ ಪೂಜೆ-ಪುನಸ್ಕಾರ ಬಲ್ಲವರಾಗಿದ್ದರಿಂದ ಜನ ಅವರನ್ನು ’ತಂತ್ರಿ’ ಗಳೆಂದು ಕರೆಯಲಾರಂಭಿಸಿದರು. ತನಗೆ ಬರುವ ಪೂಜೆ, ಮಂತ್ರವನ್ನು ತಂತ್ರಿಗಳು ಯಾರಿಗೂ ಕಲಿಸುತ್ತಿರಲಿಲ್ಲ. ಪಾಂಡಿತ್ಯ ಪೋಲಾದರೆ ಪಾರುಪತ್ಯ ಸಿಗದು ಎಂದು ತಿಳಿದವರಾಗಿದ್ದರು. ಹೀಗಿರುವಾಗ ಮಳೆಗಾಲ ಕಳೆಯುವುದರಲ್ಲೇ ತಂತ್ರಿಗಳು ಸರ್ಪ ಕಚ್ಚಿ ಸತ್ತು ಹೋದರು. ಬೆಳೆ ನಾಶವಾಯಿತು.ಊರಲ್ಲಿ ರೋಗ ರುಜಿನ ಶುರುವಿಟ್ಟಿತು.ಜನ ಹೆದರಿ ಊರು ಬಿಟ್ಟರು. ಊರ ಹಿರಿಯರಿಗೆ ನಾಗನಿಗೆ ಏನು ಅಪಚಾರವಗಿದೆ ಎಂದುಅರ್ಥವಾಗದೇ ಹೋಯ್ತು. ತಂತ್ರಿಗಳ ಕುಟುಂಬ ಊರು ಬಿಟ್ಟು ಹೋದರು. ಸತೀಶ ಶೆಟ್ಟರೂ ಊರು ಬಿಟ್ಟರು.

ಛೆ!!.. ಊರಿನ ಜನ ಸೇರಿ ನಾಗನಿಗೆ ಮೆಟ್ಟಿಲು ಮಾಡಿಸಿ ಎಷ್ಟು ಚಂದ ಮಾಡಿದ್ದರು. ಆ ಚಂದದ ಜಂಬೆಟ್ಟಿಗೆ ಏನಾಯ್ತು? ಭಟ್ಟರು, ಶೆಟ್ಟರು ವಾಪಸ್ಸು ಬಂದಾರೆಯೇ? ಬೆಟ್ಟದ ನಾಗ ಮುಚ್ಚಿ ಹೋಗುವನೇ? ಇಲ್ಲ ಮತ್ತೆ ಕಂಗೊಳಿಸುವನೇ? ಇಪ್ಪತ್ತನೆಯ ಶತಮಾನಕ್ಕೆ ನಾಗ ಸಾಕ್ಷಿ ಆದಾನೆಯೆ?

ಭಾಗ ೨

ಸತೀಶ ಶೆಟ್ಟರು ನಾಗನಿಗೆ ಹೆದರಿ ತಮ್ಮ ಹೆಂಡತಿ ಊರಾದ ಕಾಸರಗೋಡಿನಲ್ಲಿ ನೆಲೆ ನಿಂತರು. ಅವರ ಮೊಮ್ಮಕ್ಕಳು ಮಂಗಳೂರಿನಲ್ಲಿ ಹೋಟೆಲ್ ಉದ್ಯಮ ಶುರುವಿಟ್ಟರು. ಇತ್ತ ಮಂಗಳೂರಿನಲ್ಲಿ ಬ್ರಿಟೀಷರ ಉಪಟಳ ಜೋರಾಯಿತು. ಮತ್ತೆ ಅವರೆಲ್ಲ ಬಾಂಬೆಯಲ್ಲಿ ’ಉಡುಪಿ ಹೋಟೆಲ್’ ಹೆಸರಿನಲ್ಲಿ ಹೋಟೆಲ್ ಉದ್ಯಮ ಬೆಳೆಸಿದರು. ಇತ್ತ ಸತೀಶ ಶೆಟ್ಟರ ಕುಟುಂಬ ೫-೬ ತಲೆಮಾರು ಕಂಡಿರಬೇಕು. ಮನೆಯವರೆಲ್ಲ ತುಳು ಮಾತಾಡುತಿದ್ದರು. ಆದ್ದರಿಂದ ತಮ್ಮ ಮೂಲ ಮಂಗಳೂರಿರಬೇಕೆಂದು ಭಾವಿಸಿದ್ದರು. ಅವರ್ಯಾರಿಗೂ ಜಂಬೆಟ್ಟಿನ ಮೂಲ ತಿಳಿದಿಲ್ಲ.. ಅದು 1970 ರ ಸಮಯ.ಬಾಂಬೆ ಬಹಳ ಬೆಳೆಯುತ್ತಿದ್ದ ಕಾಲ. ಹೋಟೆಲ್ ಉದ್ಯಮ ಮತ್ತಷ್ಟು ಬೆಳೆಸಲೋಸುಗ ಸತೀಶ ಶೆಟ್ಟರ ೬ನೇ ತಲೆಮಾರಿನ ಮಗ ಅವನೀಶ ಶೆಟ್ಟಿ ತನ್ನಲ್ಲಿದ್ದ ದುಡ್ಡನ್ನೆಲ್ಲಾ ಹಾಕಿ ಪಂಚತಾರಾ ಹೋಟೇಲ್ ಶುರು ಮಾಡಿದರು.

ಮೊದ ಮೊದಲು ಚೆನ್ನಾಗಿಯೇ ನಡೆಯುತ್ತಿದ್ದ ವ್ಯಾಪಾರ ಈಗ ಕ್ಷೀಣವಾಗ ತೊಡಗಿತು. ಸಾಲದ ಹೊರೆಯೂ ಹೆಚ್ಚಿತು. ಊರ ಕಡೆಯಿಂದ ಬಂದಿದ್ದ ಜ್ಯೋತಿಷಿಯವರನ್ನು ಕೇಳಿದಾಗ ’ಇದು ನಾಗನ ಉಪದ್ರ.ನಿಮ್ಮ ಮೂಲ ಮಂಗಳೂರಾದ್ದರಿಂದ ಅಲ್ಲಿಯೇ ಒಂದು ಅಷ್ಟಮಂಗಲ ಪ್ರಶ್ನೆ ಇಟ್ಟು ಪರಿಹರಿಸಿ ಕೊಳ್ಳಿ’ ಎಂದರು. ಶೆಟ್ಟರು ಸತ್ಯವನ್ನು ಹುಡುಕಿ ಮಂಗಳೂರಿಗೆ ಹೊರಟರು.

ಸೀತಾರಾಮ ಭಟ್ಟರು ಸತ್ತ ಮೇಲೆ ಅವರ ಮಕ್ಕಳು ಜಂಬೆಟ್ಟನ್ನು ಬಿಟ್ಟು ಶೃಂಗೇರಿಯಲ್ಲಿ ಬಂದು ನೆಲೆಸಿದರು. ತಮ್ಮ ಅಪ್ಪನಿಂದ ಬಂದಿದ್ದ ಪೌರೋಹಿತ್ಯ ಬದಿಗಿಟ್ಟು ಅಡುಗೆ ಭಟ್ಟರಾಗಿ ಹೆಸರು ಮಾಡಿದರು.ಅವರ ವಂಶವೇ ಬಾಣಸಿಗ ವೃತ್ತಿಯಲ್ಲಿ ಹೆಸರು ಮಾಡಿತು. ಸೀತಾರಮ ಭಟ್ಟರ ಐದನೇ ಕುಡಿ ಶ್ರೀನಿವಾಸ ಭಟ್ಟರು ತಮ್ಮ ತಂದೆಯೊಂದಿಗೆ ಸ್ವಾತಂತ್ರ್ಯ ಪೂರ್ವದಲ್ಲೇ ಬೆಂಗಳೂರಿನಲ್ಲಿ ಬಂದು ನೆಲೆಸಿ ಹೋಟೆಲ್ ಉದ್ಯಮ ಶುರು ಮಾಡಿಡರು. ಉದ್ಯಮ ಉತ್ತಮವಾಗಿಯೇ ಸಾಗುತ್ತಿತ್ತು. ಭಟ್ಟರು ತಮ್ಮ ಲಾಭದ ಒಂದಂಶವನ್ನು ಸಮಾಜಕ್ಕೂ ವಿನಿಯೋಗಿಸುತ್ತಿದ್ದರು. ದಾನ-ದತ್ತಿ ಕಾರ್ಯಗಳಿಗೆ ಕೊಡುಗೈದಾನಿಯಾಗಿ ಹೆಸರುವಾಸಿಯಾದರು. ಶ್ರೀನಿವಾಸ ಭಟ್ಟರು ೮೦ ವರುಷದ ವಯೋ ವೃದ್ಧರು. ಇಂತಹ ಇಳಿವಯಸ್ಸಿನಲ್ಲಿ ಭಟ್ಟರಿಗೆ ಒಂದು ಕೌಟುಂಬಿಕ ಸಮಸ್ಯೆ ಕಾಡಿತು. ಅವರ ಮಗಳ ಮಕ್ಕಳಿಗೆ ಅಪರೂಪದ ಖಾಯಿಲೆ ಬಂದು ಅಂಗವೈಕಲ್ಯಕ್ಕೆ ಒಳಗಾದರು. ಮಗನ ಹೆಂಡತಿ ಚಿಕ್ಕ ಪ್ರಾಯದಲ್ಲೇ ಸತ್ತು ಹೋದಳು. ಮಗದೊಬ್ಬ ಮಗ ಸತ್ತು ಹೋದ. ಸಾವು-ನೋವುಗಳಿಂದ ನೊಂದ ಭಟ್ಟರು ಜ್ಯೋತಿಷ್ಯ ಕೇಳಲು ಹೊರಟರು. ” ತನ್ನ ಕುಟುಂಬ ಯಾವ ದೈವಕ್ಕೂ ಅಪಚಾರವೆಸಗಿಲ್ಲ.  ತಮ್ಮ ಕೈಲಾದಷ್ಟು ದಾನ-ಧರ್ಮಗಳನ್ನೂ ಮಾಡಿರುವೆ. ನನ್ನ ಕುಟುಂಬದ ಸಾವು-ನೋವಿಗೆ ಕಾರಣವಾದರೂ ಏನು?” ಎಂದು ಕೇಳಲಾಗಿ, ಜ್ಯೋತಿಷಿಯವರು ನಿಮ್ಮ ಕುಲದೈವ ಮುನಿದಂತೆ ಕಾಣುತ್ತಿದೆ. ನೀವು ಅಷ್ಟಮಂಗಲ ಪ್ರಶ್ನೆ ಇಟ್ಟು ನೋಡಿ ಎಂದರು. ತಮ್ಮ ಕುಲದೈವವನ್ನೇ ತಿಳಿಯದ ಭಟ್ಟರು ನೇರವಾಗಿ ಆಷ್ಟಮಂಗಲ ಪ್ರಶ್ನೆ ಇಡುವಲ್ಲಿ  ಮನಸು ಮಾಡಿದರು.

 

ಕೇರಳದ ಪಂಡಿತರನ್ನು ಮನೆಗೆ ಕರೆಸಿದ ಭಟ್ಟರು ತಮ್ಮ ನೋವಿನ ಕಥೆ ತಿಳಿಸಿದರು. ಪಂಡಿತರು ಮಂಡಲ ಬರೆದು, ಕವಡೆ ಹಾಕಿ ತಮ್ಮ ಅಪ್ರತಿಮ ವಿದ್ಯೆಯ ಮೂಲಕ ಭಟ್ಟರ ವಂಶವೃಕ್ಷ ಗಮನಿಸಿದಾಗ ಅವರಿಗೆ ಬಹಳ ಖೇದವಾಯಿತು. ಸುಮಾರು ೩೦೦ ವರುಷಗಳ ಹಿಂದೆ ನಡೆದ ಘಟನೆ ವಿವರಿಸಲಾರಂಭಿಸಿದರು.

ಸೀತಾರಮ ಭಟ್ಟರಿಗೆ ತಾನೊಬ್ಬನೇ ಎಲ್ಲ ಪೂಜಾ ಪಾಂಡಿತ್ಯ ಪಡೆದು ಹೆಸರು ಮಾಡಬೇಕೆಂಬ ಹುಚ್ಚು ಜೋರಾಯಿತು. ಬೇರೆಯವರ ಪಾಂಡಿತ್ಯ ಕದಿಯಲು ಬಹಳ ಪ್ರಯತ್ನವನ್ನೂ ಮಾಡುತ್ತಿದ್ದರು. ’ಲಕ್ಷ್ಮೀ ಹೃದಯ ಹೋಮ’ ಮಾಡುವ ಪೂಜೆಯ ಮಂತ್ರ ಜಂಬೆಟ್ಟಿನ ಪಕ್ಕದ ಊರಾದ ಮಾವಿನಬೆಟ್ಟಿನ ಭಟ್ಟರ ಮಗನಾದ ವಾಮನನಿಗೆ ಮಾತ್ರವೇ ತಿಳಿದಿತ್ತು. ವಾಮನ ಇನ್ನೂ ಹತ್ತು ವರುಷದ ಹುಡುಗ.  ಮಾವಿನಬೆಟ್ಟು ಇರುವುದು ಸೀತಾನದಿಯ ಇನ್ನೊಂದು ದಡದಲ್ಲಿ.    ತಾಳೇಗರಿಯಲ್ಲಿ ತುಳುಲಿಪಿಯಲ್ಲಿ ಮುದ್ರಿತವಾದ ’ಲಕ್ಷ್ಮೀ ಹೃದಯ ಹೋಮ’ ದ ಮಂತ್ರದ ಪ್ರತಿ ವಾಮನ ಭಟ್ಟನಲ್ಲಿ ಮಾತ್ರವೇ ಇತ್ತು. ಆ ಕಾಲದ ಮುದ್ರಣ ಮಾಡುವ ಯಾವುದೇ ವಿಧಾನವಿಲ್ಲವಾದ್ದರಿಂದ ಎಷ್ಟೋ ವಿದ್ಯೆಗಳು ಬರಿಯ ಒಂದು ಕುಟುಂಬದ ವಿದ್ಯೆಯಾಗಿ ಇರುತ್ತಿತ್ತು. ಜಂಬೆಟ್ಟಿನ ಶ್ಯಾಮ ರಾಯರ ಮನೆಯಲ್ಲಿ ಲಕ್ಷ್ಮೀ ಹೃದಯ ಹೋಮವಿದೆ ಎಂದು ತಿಳಿದ ಸೀತಾರಮ ಭಟ್ಟರು ಇದೇ ಸರಿಯಾದ  ಸಮಯ ಎಂದು ಹೊಂಚು ಹಾಕಿ ಸೀತಾನದಿಯ ದಡದಲ್ಲಿ ವಾಮನ ಭಟ್ಟನಿಗೆ ಕಾಯತೊಡಗಿದರು. ಶ್ಯಾಮರಾಯರ ಮನೆಯಲ್ಲಿ ಹೋಮ ನಡೆಸಲು ೧೦ ಹರೆಯದ ಪುಟ್ಟ ಹುಡುಗ ವಾಮನ ಭಟ್ಟನಿಗೆ ಬುಲಾವ್ ಬಂದಿತ್ತು. ವಾಮನ ’ಲಕ್ಷ್ಮೀ ಹೃದಯ ಹೋಮ’ ದ ತಾಳೆಗರಿಯನ್ನು ದೋಣಿಯಲ್ಲಿಟ್ಟುಕೊಂಡು ತಾನೇ ದೋಣಿಯ ಹುಟ್ಟು ಹಾಕುತ್ತಾ ಸೀತಾನದಿಯನ್ನು ದಾಟುತ್ತಿದ್ದ. ಸೀತಾರಾಮ ಭಟ್ಟರು ತಾನೂ ಒಂದು ದೋಣಿ ಹಿಡಿದುಕೊಂಡು ನದಿಯ ಮಧ್ಯೆ ವಾಮನನಿಗೆ ಕಾದರು. ಅವನು ಹತ್ತಿರ ಬರುತ್ತಿಂದಂತೆ…

ಸೀತಾರಾಮ ಭಟ್ಟ– “ಮಾಣಿ ಆ ಮಂತ್ರದ ತಾಳೆಗರಿ ಕೊಡ್ ನಂಗೆ.”

ವಾಮನ– ” ನಾ ಕೊಡುದಿಲ್ಲ.. ಅಪ್ಪಯ್ಯ ಬೈತ್ರು.(ಬಯ್ಯುತ್ತಾರೆ).”

ಸೀತಾರಾಮ ಭಟ್ಟ-“ಕೊಡದೇ ಇದ್ರೆ ನಾ ನಿನ್ನ್ ಸುಮ್ನೆ ಬೆಚ್ಚುದಿಲ್ಲೆ(ಇಡುವುದಿಲ್ಲ) ಬೇವರ್ಶಿ…

ವಾಮನ– “ಎಂತ ಮಾಡ್ ತ್ರಿ? (ಮಾಡುತ್ತೀರ?)

ಸೀತಾರಾಮ ಭಟ್ಟರು ವಾಮನನ ಪ್ರತಿ ಮಾತಿಗೂ ಕಾಯದೇ ಅವನು ಹಿಡಿದಿದ್ದ ದೋಣಿಯ ಹುಟ್ಟನ್ನು ಕಸಿದು ಅದನ್ನೇ ಅಸ್ತ್ರವಾಗಿ ಬಳಸಿ ವಾಮನನ ತಲೆಗೆ ಬಲವಾಗಿ ಹೊಡೆದರು. ಅರೆ ಪ್ರಜ್ನಾವಸ್ಥೆ ತಲುಪಿದ ಹುಡುಗನನ್ನು ನೀರಿನಲ್ಲಿ ಮುಳುಗಿಸಿ ಕೊಂದೇ ಬಿಟ್ಟರು. ತಮ್ಮಿಷ್ಟದ ತಾಳೆಗರಿಯನ್ನು ಪಡೆದು ಏನೋ ಗೆದ್ದ ಖುಶಿಯಲ್ಲಿ ಮನೆಗೆ ನಡೆದರು. ಅಂದು ನಡೆದ ಬಾಲಹತ್ಯೆಗೆ ಸೀತಾನದಿ ಮೂಕ ಸಾಕ್ಷಿಯಾದಳು. ಮೌನ ರೋಧನವನ್ನಷ್ಟೇ ಗೈದಳು.  ಪುಟ್ಟಹುಡುಗ ವಾಮನ ದೋಣಿಯಲ್ಲಿ ಕಾಲು ಜಾರಿ ಈಜಲು ಬಾರದೇ ಮುಳುಗಿ ಸತ್ತು ಹೋದ ಎಂದು ಜನ ನಂಬಿದರು. ಮನುಷ್ಯರಿಗೆ ದ್ರೋಹ ಬಗೆದರೂ ದೈವ ಬಿಟ್ಟೀತೇ?. ಇತ್ತ ಸೀತಾರಾಮ ಭಟ್ಟ ಬಾಲ ಹತ್ಯೆ , ಬ್ರಹ್ಮ ಹತ್ಯೆಯ ದೋಷ ಹೊಂದಿದ್ದರೂ ಎಂದಿನಂತೆ ಜಂಬೆಟ್ಟಿನ ನಾಗನಿಗೆ ಪೂಜೆ ಮಾಡಲು ಬಂದರು. ನಾಗನಿಗೆ ಇಂತಹ ಪಾಪಿಯ ಕಲ್ಮಶ ಪೂಜೆ ಬೇಕಿರಲಿಲ್ಲ. ಪೂಜೆ ಮಾಡಲು ಬಂದ ಭಟ್ಟನನ್ನು ನಾಗ ಕಚ್ಚಿ ಕೊಂದೇ ಬಿಟ್ಟ…

ಅಂದು ಬಾಲಹತ್ಯಾದೋಷವೆಸಗಿದ ಪಾಪಿ ಸೀತಾರಮ ಭಟ್ಟರೇ ನಿಮ್ಮ ಮುತ್ತಜ್ಜನ ಅಪ್ಪ ಎಂದು ಶ್ರೀನಿವಾಸ ಭಟ್ಟರಿಗೆ ಜ್ಯೋತಿಷಿ ಹೇಳಿದರು. ತಮ್ಮ ಹಿರಿಯರಿಂದ ಆದ ತಪ್ಪಿಗೆ ಭಟ್ಟರು ಮಮ್ಮಲ ಮರುಗಿದರು. ಮತ್ತು ಇದರಿಂದ ಪಾರಾಗುವ ಪ್ರಾಯಶ್ಚಿತ್ತ ಕರ್ಮಗಳ ಬಗ್ಗೆ ಕೇಳಿದರು.ಜ್ಯೋತಿಷಿಯವರು ಜಂಬೆಟ್ಟಿನ ಇತಿಹಾಸವನ್ನು ಹೇಳತೊಡಗಿದರು. ಜಂಬೆಟ್ಟು ಸುಮಾರು ಸಾವಿರ ವರುಷಗಳ ಹಿಂದೆ ’ಜಂಗಮ ಬೆಟ್ಟು’ ಎಂದು ಹೆಸರಾಗಿತ್ತು. ಮತ್ತೆ ಜನರ ಬಾಯಿಂದ ಬಾಯಿಗೆ ಹರಿದು ’ಜಂಬೆಟ್ಟು’ ಎಂದು ಮರು ನಾಮಕರಣವಾಯಿತು. ’ಜಂಗಮ ಬೆಟ್ಟು’ ಎನ್ನುವುದು ಜೋಗಿ-ಜಂಗಮರು ತಪಸ್ಸು ಮಾಡಿದ ಪುಣ್ಯ ಭೂಮಿ. ಜೊತೆಗೆ ನಾಗನೂ ಬಂದು ನೆಲೆನಿಂತ ಸ್ಥಳವೂ ಹೌದು. ಇಲ್ಲಿ ನಡೆದ ಅಪಚಾರಕ್ಕೆ ಪ್ರಾಯಶ್ಚಿತ್ತವಾಗಿ ನಾಗನನ್ನು ಪ್ರಸನ್ನಗೊಳಿಸುವಂತಹ ನಾಗಮಂಡಲದಂತಹ ಪುಣ್ಯ ಕಾರ್ಯವಾಗಬೇಕು ಎಂದು ಜ್ಯೋತಿಷಿ ಹೇಳಿದರು.

ಅತ್ತ ಅವನೀಶ ಶೆಟ್ಟರು ಅಷ್ಟಮಂಗಲ ಪ್ರಶ್ನೆ ಇಟ್ಟಾಗ ತಮ್ಮ ಕುಲದೈವ ಜಂಬೆಟ್ಟಿನ ನಾಗ ಎಂದು ತಿಳಿಯಿತು. ನಾಗನಿಗೆ ಪೂಜೆಯನ್ನು ಮಾಡಿಸುತಿದ್ದ ಶೆಟ್ಟರ ಪೂರ್ವಜರು ಕಾರಣಾಂತರಗಳಿಂದ ಪೂಜೆ ನಿಲ್ಲಿಸಿದರಾದ್ದರಿಂದ ನಾಗನು ಮುನಿದಿದ್ದಾನೆ. ಆದ್ದರಿಂದ ನಾಗನ ಕಟ್ಟೆಯ ಜೀರ್ಣೋದ್ಧಾರದ ಕಾರ್ಯ ಮಾಡಬೇಕು ಎಂಬುದಾಗಿ ತಿಳಿದು ಬಂತು. ಅವನೀಶ ಶೆಟ್ಟರು ಜಂಬೆಟ್ಟೆಂಬ ಊರನ್ನು ಹುಡುಕಿ ಹೋದರು. ಜಂಬೆಟ್ಟಿನಲ್ಲಿ ಬೆಟ್ಟು ಎಂದು ಊರಿನಲ್ಲಿರುವ ಹೆಸರಿನಂತೆ ಬೃಹದಾಕಾರದ ಬೆಟ್ಟ ತನ್ನ ಇರುವಿಕೆಯನ್ನು ಉಳಿಸಿಕೊಂಡು ಊರಿನ ಇತಿಹಾಸವನ್ನು ಹೇಳುವ ಪ್ರಯತ್ನ ಮಾಡುತ್ತಲಿತ್ತು. ಬೆಟ್ಟದ ಕೆಳ ಭಾಗದಲ್ಲಿರುವ ಹೊಲಗದ್ದೆಗಳೆಲ್ಲಾ ಬರಡಾಗಿ ತಮ್ಮ ಸತ್ವವನ್ನು ಕಳೆದು ಕೊಂಡಿದ್ದೇವೆ ಎಂದು ಸಾರಿ ಹೇಳುವಂತಿತ್ತು. ಬೆಟ್ಟದ ಕೆಳಭಾಗದಲ್ಲಿ ದೂರದಲ್ಲಿರುವ ಒಂದೆರಡು ಮನೆಗಳು ಜನರ ಇರುವಿಕೆಯನ್ನು ತೋರುತಿತ್ತು. ಶೆಟ್ಟರು ಅಲ್ಲಿರುವ ಊರ ಹಿರಿಯರನ್ನು ಮಾತಾಡಿಸಿ ತಾವು ಬಂದ ವಿಚಾರವನ್ನು ತಿಳಿಸಿದರು. ಊರಿನ ಜನರಿಗೆ ಬೆಟ್ಟದಲ್ಲಿ ನಾಗನ ಇರುವಿಕೆ ಇದೆ ಎಂಬುದೇ ತಿಳಿದಿರಲಿಲ್ಲ. ಊರ ಹಿರಿಯರಾದ  ಸುಬ್ಬಜ್ಜ ತಮ್ಮಊರಿನಲ್ಲಿ ಸರಿಯಾದ ಮಳೆ-ಬೆಳೆ ಇಲ್ಲದೆ ಎಷ್ಟೋ ದಶಕಗಳು ಕಳೆದಿವೆ ಎಂದು ಹೇಳಿದರು. ನಾಗನ ಜೀರ್ಣೋದ್ಧಾರವಾಗೆಬೇಕೆಂಬ ಒಮ್ಮತದ ನಿರ್ಧಾರಕ್ಕೆ ಬಂದರು. ಮತ್ತೆ ಒಂದು ವಾರದ ತರುವಾಯ ಶ್ರೀನಿವಾಸ ಭಟ್ಟರು ಸಹ ಜಂಬೆಟ್ಟನ್ನು ಹುಡುಕಿ ಬಂದರು.ಅವರೂ ಸಹ ಹಿರಿಯರಾದ ಸುಬ್ಬಜ್ಜನನ್ನು ಭೇಟಿಯಾಗಿ ತಮ್ಮ ಕಥೆಯನ್ನು ಹೇಳಿದರು. ಜೊತೆಗೆ ನಾಗನ ಕಾರಣಿಕವನ್ನು ಕೊಂಡಾಡಿದರು. ಜೀರ್ಣೋದ್ಧಾರ ಕಾರ್ಯಕ್ಕೆ ತಾನೂ ನೆರವಾಗುವುದಾಗಿ ಹೇಳಿದರು. ಎಲ್ಲರೂ ಸೇರಿ ಒಂದು ನಾಗನ ದರ್ಶನ ಸೇವೆ ಮಾಡಿಸುವುದಾಗಿ ತೀರ್ಮಾನಿಸಿದರು.

ನಾಗನ ದರ್ಶನ ಮಾಡಿಸಿದಾಗ  ದೇವರನ್ನು ಆವಾಹಿಸಿಕೊಂಡ ಪಾತ್ರಿ ಕಾಲ ಗರ್ಭದಲ್ಲಿ ಕಳೆದುಹೋದ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಲು ನಿಮ್ಮನ್ನು ಕರೆಸಿಕೊಂಡೆ. ಬೆಟ್ಟದಲ್ಲಿ ಹುದುಗಿ ಶಿಥಿಲಗೊಂಡಿರುವ ತನ್ನನ್ನು ಮೇಲೆಕ್ಕೆತ್ತಿ , ಹೊಸ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹೇಳಿತು. ಊರವರೆಲ್ಲಾ ಸೇರಿ ಬೆಟ್ಟವನ್ನು ಸಮತಟ್ಟುಗೊಳಿಸುವ ಕಾರ್ಯ ಶುರು ಮಾಡಿದರು. ಮೊದಲು ಶೆಟ್ಟರ ಪೂರ್ವಜರು ನಾಗನಿಗೆ ಮಾಡಿಸಿದ್ದ ಮೆಟ್ಟಿಲುಗಳು ಬೆಟ್ಟದಲ್ಲಿ ಗೋಚರಿಸಿ ದೇವರ ಇರವನ್ನು ತೋರಿಸಿದವು. ಮಣ್ಣಿನ ಅಡಿ ನಾಗನ ಮೂರ್ತಿ ದೊರಕಿತು. ಹೊಸ ನಾಗನ ಕಟ್ಟೆಯನ್ನು ಕಟ್ಟಿ , ಹೊಸ ನಾಗನ ಮೂರ್ತಿಯನ್ನು ಕೂಡಿಸಿದರು. ಊರವರೆಲ್ಲಾ ಸೇರಿ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿದರು. ಭಟ್ಟರು ನಾಗನಿಗೆ ನಾಗಮಂಡಲದ ಹರಕೆಯನ್ನು ಅರ್ಪಿಸಿದರು. ನಾಗನು ಪ್ರಸನ್ನಗೊಂಡು ತಾನು ಊರಿಗೆ ಮಳೆ-ಬೆಳೆಯನ್ನು ಕೊಡುವೆ, ನಂಬಿದ ಜನರಿಗೆ ಇಂಬು ಕೊಡುವೆ ಎಂದು ವಚನ ಕೊಟ್ಟಿತು.  ಭಟ್ಟರಾಗಲಿ, ಶೆಟ್ಟರಾಗಲೀ, ಯಾವುದೇ ಜಾತಿಯವರಾದರೂ ತನಗೆ ಅಪಚಾರ ಮಾಡಿದ್ದೇ ಆದಲ್ಲಿ , ತಲ-ತಲಾಂತರಕ್ಕೂ ತನ್ನ ಇರುವಿಕೆಯನ್ನು ತೋರಿಸದೆ ಬಿಡೆನು. ತನಗೆ ಎಲ್ಲಾ ಮನುಜರೂ ಒಂದೇ. ಎಲ್ಲರೂ ನಿಸ್ವಾರ್ಥ ಸೇವೆ ಮಾಡುವಂತಾಗಲಿ. ಜಂಬೆಟ್ಟು ಮತ್ತೆ ಪಾವನ ಭೂಮಿಯಾಗಲಿ ಎಂದು ಹರಸಿ ನಾಗನ ಪಾತ್ರಿ ಹಿರಿದುಕೊಂಡ.

ಕಲಿಗಾಲದಲ್ಲೂ ಜಂಬೆಟ್ಟಿನ ಇತಿಹಾಸ ಈ ಪರಿಯಲ್ಲಿ ನಾಗನ ಮೂಲಕ ತೆರೆದುಕೊಂಡಿದೆ ಎಂದರೆ ನಾಗನ ಮಹತ್ವ ನಾಸ್ತಿಕ ಜನಕ್ಕೂ ನಂಬಿಕೆ ಬರುವ ಕಾಲ ಹತ್ತಿರಬಂತೇನೋ!!. ಯಾಕೋ ಇತ್ತೀಚಿಗೆ ಜಂಬೆಟ್ಟಿನ ಬೆಟ್ಟ ಹತ್ತಿ ಹೋಗಿದ್ದೆ. ಅಂದು ಬಂಜರಾಗಿದ್ದ  ಭೂಮಿ ಇಂದು ಹಸಿರ ಪೈರಿನ ಜೊತೆ ಆಡಿದ ಲಾಸ್ಯ, ತಂಗಾಳಿಯು  ಬೆಟ್ಟವನ್ನು ತಂಪಾಗಿ ತಬ್ಬುತಿದ್ದ  ಪರಿ ನಾ ಹೇಗೆ ವರ್ಣಿಸಲಿ!! .

ಈ ಸೌಂದರ್ಯಕ್ಕೆ ಜೋಗಿ-ಜಂಗಮರು ಮರುಳಾಗದೆ ಇಹರೆ??

8 thoughts on “ದೈವ ನಡೆ

  1. nimma bhaasheya melina hiditha avarnaneeya….nijavaagiyu sthambibhoothanaade….sakathaagide…mundhuvaresi….

  2. ನಿಮ್ಮೆಲ್ಲರ ಅಮೂಲ್ಯ ಅಭಿಪ್ರಾಯಕ್ಕೆ ನಾನು ಚಿರಋಣಿ

  3. ನಾನು ಒಂದು ನಾಗನ ದರ್ಶಿನದಂಗ್ ಕೆಂಬ ಅಂದ್ ಮಾಡಿದಿ … ಈ ಕಿನ್ನರಿ ಅಂಬುವರ ಇಷ್ಟ್ ಲೈಕ್ ಮಾಡಿ ಬರಿತರಲ್ಲ ಅವರ ಎಂತ ಆರು ಹಿಂದಿನ ಜಲ್ಮಾದಂಗ್ ಜಂಬೆಟ್ಟು ಸಂಸ್ಥಾನದ ಅಪ್ಪಣ್ಣ ಶೆಟ್ಟಿಯವರ ಆಸ್ಥಾನ ಕವಿ ಆಹೀ ಇದ್ದೀರಾ…ಎಂಥ ಕತಿ ಅಂದೆಲಿಕಿ. ಕೆಂಡ ಆರ್ ಮೇಲೆ ಎಂಥ ಹುಟ್ಟಗತಿ ಬಂತ್ ಅಂದೇಳಿ ಕಡಿಕೆ ಹೇಳ್ತೆ

  4. ನಿಮ್ಮ ಅಭಿಪ್ರಾಯಕ್ಕೆ ಉತ್ತರಿಸಲು ನಾನು ಹಿಂದಿನ ಜನ್ಮ ರಹಸ್ಯ ತಿಳಿಯಬೇಕು

Leave a Reply

Top