You are here
Home > ಪುಟ ೩ > ಪೂರ್ಣಾಹುತಿ

ಪೂರ್ಣಾಹುತಿ

follow ಅಳು ಬರುತ್ತಲೇ ಇಲ್ಲ. ಆಪ್ತ ಸ್ನೇಹಿತೆಯ ಸಾವು, ಹೆಣದ ಮುಂದೆ ನಿಂತರೂ ಕಣ್ಣಲ್ಲಿ ನೀರಾಡಿಲ್ಲ. ಆರ್ಯ ! ಅದೇ ಮುಗ್ಧ ಮುಖ. ಸಾವಿನಲ್ಲೂ ನಗುಮುಖ. ಬಹುಶ: ಯಾರ ಬರುವಿಕೆಗಾಗೋ ಕಾದು ಕೊನೆಯುಸಿರೆಳೆದಂತಿದೆ. ಆರ್ಯಾಳ ಮಗಳು “ಅದ್ವಿತಿ”ಯನ್ನು ಯಾರಿಂದಲೂ ಸಮಾಧಾನ ಮಾಡಲು ಆಗುತ್ತಿಲ್ಲ. ಪಾಪಾ ! ಆ ಎಳೆ ಕಂದ ಇನ್ನು ಮೂರೂ ವರ್ಷ ಕೂಡ ತುಂಬಿಲ್ಲ. ಅದು ಅಳುತ್ತಿದ್ದುದ್ದು ಅಮ್ಮನಿಗಾಗಿ ಅಲ್ಲ ಅವಳನ್ನು ಹೊರಗೆ ಆಡಲು ಯಾರು ಬಿಡುತ್ತಿಲ್ಲ ಎಂಬ ಕಾರಣಕ್ಕೆ. ಎಷ್ಟೆಲ್ಲಾ ಕಣ್ಣ ಮುಂದೆ ನಡೆಯುತ್ತಿದ್ದರೂ ನನಗೆ ಅಳು ಬರುತ್ತಿಲ್ಲ. ನನ್ನಷ್ಟೇ ವಯಸ್ಸು ಸಾಯುವಂತದೇನಿತ್ತು? ಅವಳ ಗಂಡನ ಕಡೆ ನನ್ನ ಕೋಪ ತಿರುಗಿತು. ಸಾಕಲು ಯೋಗ್ಯತೆ ಇಲ್ಲದವನಿಗೆ ಪ್ರಾಣ ತೆಗೆಯುವ ಹಕ್ಕು ಇಲ್ಲ. ವಾರಕ್ಕೊಮ್ಮೆಯಾದರೂ ಭೇಟಿಯಾಗುತಿದ್ದೆವು. ನನ್ನ ಈ ಕೆಲಸದ ಜಂಜಡ, ಇವಳ ಗಂಡನ ಗೋಳಿನಲ್ಲಿ ಒಮ್ಮೊಮ್ಮೆ ತಿಂಗಳು ಮುಟ್ಟುತಿತ್ತು. ನನ್ನ ಬರುವಿಕೆಗಾಗಿ ಕಾಯುತಿದ್ದ ಜೀವ ಆರ್ಯ. ಇಂದು ಆ ಜೀವ ಕಣ್ಮರೆಯಾಗಿತ್ತು.

ನನಗೆ ಇನ್ನು ನೆನಪಿದೆ, ನನ್ನ ಕಾಲೇಜಿನ ಮೊದಲ ದಿನ, ನನಗೆ ಮಾತ್ರ ಏನು, ಎಲ್ಲರಿಗೂ ಎಲ್ಲರ ಪರಿಚಯ ಹೊಸತು. ಅಮ್ಮ ಯಾವಾಗಲೂ ಹೇಳುತ್ತಿದ್ದದ್ದು ಒಂಬತ್ತನೇ ಸಂಖ್ಯೆ ನನ್ನ ಅದೃಷ್ಟದ ಸಂಕೇತ ಅಂತ. ಆ ನಂಬರ್ ನ ಬೆಂಚ್ ಅಲ್ಲಿ ಇದ್ದದ್ದು ಇದೆ ಆರ್ಯ. ಅವಳ ಮುಖದಲ್ಲೂ ಭಯ. ಯಾರು ನನ್ನೊಂದಿಗೆ ಇರುತ್ತಾರೋ ಎಂದು. ನನ್ನ ನೋಡಿ ಕೊಂಚ ಸಮಾಧಾನವಾಯಿತು ಅವಳಿಗೆ. ಪರಸ್ಪರ ಪರಿಚಯವಾದ ಮೇಲೆ ದಿನದಿಂದ ದಿನಕ್ಕೆ ಹೊಸ ಜೀವನಕ್ಕೆ ಹೊಂದಿಕೊಂಡೆವು. ಆರ್ಯ ಒಬ್ಬ ಬಡ ಕುಟುಂಬದ ಹುಡುಗಿ ಎಂದು ತಿಳಿದಿತ್ತು. ಅವಳೇನು ಯಾರಲ್ಲೂ ಕಷ್ಟ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಇರುವುದರಲ್ಲಿ ಖುಷಿ ಪಡುತ್ತಿದ್ದಳು. ನನಗೆ ಆರ್ಯ ಅಷ್ಟು ಇಷ್ಟವಾಗಲು ಕಾರಣ ಅವಳ ಹೆಸರು ಮತ್ತು ಅವಳ ಮುಗ್ದತೆ. ಏನು ನೋಡಿದರು ಆಶ್ಚರ್ಯ. ನಾನು ನನ್ನ ಹೊಸ ಗಾಡಿಯಲ್ಲಿ ಹೋದಾಗ ಆಶ್ಚರ್ಯ, ನಾನು ಹುಡುಗರೊಂದಿಗೆ ಮುಕ್ತವಾಗಿ ಮಾತನಾಡಿದರೆ ಆಶ್ಚರ್ಯ. ಹೀಗೆ ಎಲ್ಲದರಲ್ಲೂ ತನ್ನ ಮುಗ್ದತೆ ತೋರುತ್ತಿದ್ದಳು. ಅವಳ ಈ ಬುದ್ದಿ ನನಗೆ ಮುಗ್ದತೆ ಎನಿಸಿದರೂ ಬೇರೆಯವರು ಅವ್ಳನ್ನು ಪೆದ್ದಿ ಎನ್ನುತ್ತಿದ್ದರು. ಈಗ ಎಲ್ಲ ನೆನಪು, ಮನಸಿನಿಂದ ಅಳಿಸಲಾಗದ ನೆನಪು. ಅದ್ವಿತಿ ಅಳುತ್ತಲೇ ಇತ್ತು. ನನಗೆ ಕೋಪ “ಅಮ್ಮನ್ನು ಬದುಕಲು ಬಿಡಲಿಲ್ಲ, ಮಗುವಿಗಾದರು ಸ್ವಲ್ಪ ಸ್ವಾತಂತ್ರ್ಯ ಕೊಡಿ” ಎಂದು ಹೇಳುವ ಮನಸಾದರೂ ಎಲ್ಲರ ಮುಂದೆ ನಂದೇನು ಪ್ರದರ್ಶನ ಎಂದು ಅದ್ವಿತಿ ಕೈಗೆ ನನ್ನ ಮೊಬೈಲ್ ಕೊಟ್ಟು ಆಡಲು ಹೇಳಿದೆ. ಅದು ನನಗೆ ಅಂಟಿಕೊಂಡ ಮಗು, ನನ್ನ ತೊಡೆ ಮೇಲೆ ಕುಳಿತು ಆಟವಾಡತೊಡಗಿತು.

ನೆನಪಿನಾಳದಿಂದ ಒಂದೊಂದೇ ನೆನಪು ಹೊರಬರತೊಡಗಿತು. ನಾನು ಬರುವ ವಿಷಯ ತಿಳಿದರೆ ಸಾಕು ಆರ್ಯಗೆ ಖುಷಿ, ಅದು ನನಗೆ ತಿಳಿಯುತಿದ್ದು ಅವಳು ಮಗುವನ್ನು ಅಲಂಕರಿಸುತಿದ್ದ ರೀತಿಯಲ್ಲಿ. ಮಿಕ್ಕ ದಿನ ಅವಳೆಷ್ಟು ಸುಖ ಪಟ್ಟಿದ್ದಾಳೆಂದು ನನಗೆ ಗೊತ್ತಿತ್ತು. ನಾನು ಹೋಗುವುದು ಕೊಂಚ ತಡವಾದರೂ ಮುಖದಲ್ಲಿ ಗಾಬರಿ. ತನ್ನ ಗಂಡನಿಗೂ ಅವಳು ಇಷ್ಟು ಕಾಯುತ್ತಿರಲಿಲ್ಲ. ಇಷ್ಟೇನು ಕಾಯ್ತಾನೇ ಇರಲಿಲ್ಲ. ಆರ್ಯಾಳ ಪ್ರಪಂಚದಲ್ಲಿ ಇದ್ದದ್ದು ಇಬ್ಬರೇ, ಒಂದು ನಾನು ನನ್ನ ಬಿಟ್ಟರೆ ಅದ್ವಿತಿ. ಹಾಗೆ ನೋಡಿದರೆ ಇಬ್ಬರಲ್ಲಿ ಮೊದಲ ಸ್ಥಾನ ನನಗೆ ಕೊಟ್ಟಿದ್ದಳು.

ಕೊನೆ ವರ್ಷದ ಓದು ಅರ್ಧವಿದ್ದಾಗಲೇ ಇವಳ ಮದುವೆ ನಿಶ್ಚಯವಾಗಿದ್ದು ನನಗೆ ಆಶ್ಚರ್ಯವಾಗಿತ್ತು. ನಾನಂತು” ಲೇ, ಏನೇ ನಿನ್ನ ಪಾಡು, ಓದೇ, ನಿನ್ನ ಕಾಲ ಮೇಲೆ ನಿಲ್ಲುವಷ್ಟಾದರೂ ಓದು, ಆಮೇಲೆ ಇದ್ದದ್ದೇ ಈ ಜಂಜಡ” ಎಂದೇ. ಅಳುತ್ತ ಆರ್ಯ ನನ್ನದೇನು ನಡೆಯೋಲ್ಲ ಕಣೆ ನಮ್ಮ ಮನೆಯಲ್ಲಿ. ಇಷ್ಟು ದಿನ ಕಾಲೇಜಿಗೆ ಬಂದದ್ದೇ ನನ್ನ ಪುಣ್ಯ. ಅಪ್ಪ ಅಮ್ಮ ಇಬ್ಬರು ನನಗು ತಿಳಿಸದೇ ಮದುವೆ ಮಾತು ಕಥೆ ಮುಗಿಸಿದ್ದಾರೆ.” ಎಂದಳು. “ಲೇ, ಆರ್ಯ ಅದೇನೇ ಹುಡುಗನನ್ನು ನೋಡದೆ ಮದುವೆಗೆ ನೀನು ಹೇಗೆ ಒಪ್ಪಿದ್ಯೆ? ಬುದ್ದಿ ಇದ್ಯಾ ನಿನಗೆ. ಬೇಡ ಅನ್ನು ಅದೇನು ಮಾಡ್ತಾರೋ ನೋಡೋಣ ಎಂದೇ. ಇಲ್ಲ ಕಣೆ ನಿನಗೆ ಗೊತ್ತಿಲ್ಲ ಅಪ್ಪ ಅಮ್ಮ ಇಬ್ಬರು ಮರ್ಯಾದೆಗೆ ಹೆದರೋ ಜನ ಪ್ರಾಣ ಬಿಡುತ್ತಾರೆ, ಆದರೆ ಮಾತಿಗೆ ತಪೋಲ್ಲ. ಅದು ಅಲ್ಲದೆ ದುಡ್ಡು ಹಾಕಿ ನನ್ನ ಮದುವೆ ಮಾಡೋ ಅಷ್ಟು ಸೌಕರ್ಯವಿಲ್ಲ ನಮಗೆ. ಗಂಡಿನವರೇ ಖರ್ಚು ಹಾಕಿ ಮದುವೆ ಮಾಡಿಕೋತಾರೆ ಕಣೆ, ಇಷ್ಟು ವರ್ಷಕ್ಕೆ ನನಗೆ ನಾನು ಇಷ್ಟ ಪಟ್ಟಂತೆ ಸಿಕ್ಕಿದ್ದು ನೀನೊಬ್ಬಳೇ ಕಣೆ ಎಂದಳು. ಕೊನೆ ಮಾತು ನನ್ನ ಬಾಯಿ ಕಟ್ಟಿಹಾಕಿತು. ಇನ್ನು ಆರು ತಿಂಗಳಿಗೆ ಕಾಲೇಜ್ ಮುಗಿಯುತ್ತದೆ. ಅಲ್ಲಿವರೆಗಾದ್ರೂ ಬರ್ತಿಯಾ ತಾನೇ ಎಂದ್ರೆ ವಿಷಾದದ ನಗೆ ನಕ್ಕ ಆರ್ಯ ಇನ್ನೆಲ್ಲಿ ಕಾಲೇಜ್ ಮುಂದಿನ ತಿಂಗಳೇ ಮದುವೆ ಕಣೆ. ಗಂಡಿನ ಮನೆಯವರ ಆತುರಕ್ಕೆ ನಮ್ಮ ಮನೆಯವರು ಒಪ್ಪಿದ್ದಾರೆ. ಅದು ಅಲ್ಲದೆ ಅವರೇ ಮದುವೆ ಖರ್ಚು ಹಾಕುವುದರಿಂದ ಅವರು ಹೇಳಿದ ಹಾಗೆ ಕೇಳಬೇಕು. ನನಗೆ ನಿಜವಾಗಿಯೂ ಅವಳ ಮನೆ ಪರಿಸ್ಥತಿ ಅರ್ಥ ಆಗಿದ್ದು ಆಗಲೇ. ನಾನು ಅವಳ ಮನೆಯ ವಿಷಯ ಕೇಳುತ್ತಿರಲಿಲ್ಲ ಹಾಗೆ ಅವಳು ಏನು ಹೇಳುತ್ತಿರಲಿಲ್ಲ. ತಂದೆ ಸಣ್ಣ ದೇವಸ್ಥಾನದ ಅರ್ಚಕ ವೃತ್ತಿಯಲ್ಲಿದ್ದರು, ತಾಯಿಗೆ ಮನೆಗೆಲಸ ಹಾಗು ದೇವಸ್ಥಾನದ ಕೆಲಸವಷ್ಟೇ ತಿಳಿದಿದ್ದು. ಮನೆಯಲ್ಲಿ ಸಂಪ್ರದಾಯದ ಕಾವು ಕೊಂಚ ಜಾಸ್ತಿಯೇ . ಆ ಕಾವಿಗೆ ಉರಿದ್ದಿದ್ದು ಆರ್ಯ. ಅರ್ಚಕರ ಮನೆಯಲ್ಲಿನ ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ನನ್ನ ಆರ್ಯಗೆ ಬಹಳ ಮುಜುಗರ, ಸಂಕೋಚ, ಭಯ ಇಂತದ್ದೇ ಕೆಲವು ಒಡವೆಗಳಿದ್ದವು. ಆದರು ನನ್ನಂತ ಸ್ನೇಹಿತೆ ಜೊತೆ ಇದ್ದು ಇವಳ ಸ್ವಭಾವ ಬದಲಾಯಿಸದೆ ಇದ್ದದ್ದೇ ಆಶ್ಚರ್ಯ. ನಾನು “ಸರಿ ಕಣೆ ಇನ್ನು ಎಷ್ಟು ದಿನ ನನ್ನ ಜೊತೆ ಇರ್ತೀಯ ನಡಿ ಊಟಕ್ಕೆ ಎಲ್ಲಾದರೂ ಹೊರಗೆ ಹೋಗೋಣ ಎಂದು ಎದ್ದೆ” ಆದರೆ ಇನ್ನು ಎಷ್ಟು ದಿನ “ಎಷ್ಟೇ ದಿನ” ಆಗುವುದೆಂದು ನಾನು ಎಣಿಸಿರಲಿಲ್ಲ. ಮದುವೆಯಾಗಿ ಕೇವಲ ೪ ವರ್ಷ ಅಷ್ಟೇ.

ಇಲ್ಲೂ ಸಹ ಎಲ್ಲರು ಏಳುವ ಸೂಚನೆ ಕಾಣುತಿತ್ತು. ತೊಡೆ ಮೇಲಿದ್ದ ಅದ್ವಿತಿಯನ್ನು ನಿಲ್ಲಿಸಿ ನಾನು ಎದ್ದು ನಿಂತೆ. ಅದ್ವಿತಿ ಕೈಗೆ ಅಕ್ಕಿ ಕೊಟ್ಟು ಅಮ್ಮನಿಗೆ ಹಾಕಲು ಹೇಳಿದರೆ, ಅದು “ಇಲ್ಲ ನಾನು ಕೊಡಲ್ಲ, ಅಮ್ಮ ನನಗೆ ಇನ್ನು ತಿಂಡಿ ಕೊಟ್ಟಿಲ್ಲ ನಾನು ಅವಳಿಗೆ ಏನು ಕೊಡಲ್ಲ” ಅಂದಿತು. ನನಗೆ ಕೋಪ ಏರಿತು. ಯಾರನ್ನು ಲೆಕ್ಕಿಸದೆ ಮಗುವನ್ನೆತ್ತಿಕೊಂಡು ಆರ್ಯಾಳ ಮುಖವನ್ನು ಕೊನೆ ಬಾರಿಗೆ ನೋಡಿ ಎಲ್ಲರಿಗು ಕೇಳುವಂತೆ ನಿಮ್ಮ ಶಾಸ್ತ್ರ ಸಂಪ್ರದಾಯ ಮುಗಿದ ಮೇಲೆ ತಿಳಿಸಿ ಎಂದು ಮಗುವಿನೊಡನೆ ಮನೆಗೆ ಬಂದೆ. ಇನ್ನು ನನ್ನ ಆರ್ಯ ಇಲ್ಲ. ಒಪ್ಪುವುದು ನನ್ನಿಂದ ಸಾಧ್ಯವಿಲ್ಲ. ಅದ್ವಿತಿಗೆ ತಿನ್ನಲು ತಿಂಡಿ ಕೊಟ್ಟೆ, ತಿಂಡಿ ತಿಂದ ಅದ್ವಿತಿ ನನ್ನ ಮನೆಯಲ್ಲಿದ್ದ ಪಾತ್ರೆಯನ್ನೇ ಆಟಿಕೆ ಮಾಡಿಕೊಂಡು ಆಟಕ್ಕೆ ಕುಳಿತಿತ್ತು.

follow ಮತ್ತೆ ಅದೇ ನೆನಪು, ಆರ್ಯಾಳ ಮದುವೆಗೆ ಹೋದರೆ ಅವಳ ಮುಖದಲ್ಲಿ ಸಂತೋಷವೇ ಇಲ್ಲ. ಇದು ಬಲವಂತದ ಮದುವೆ ಎಂದು ತಿಳಿದಿತ್ತು, ಆದರೆ ಇಂಥ ಬಲವಂತ? ಅವಳನ್ನು ರೇಗಿಸಲು ಎಲ್ಲೇ ನಿನ್ನ ಗಂಡ ಎಂದಾಗ ನನ್ನ ಧ್ವನಿ ಕೇಳಿ ತಲೆ ಎತ್ತಿದ ಆರ್ಯ ನನ್ನ ಕೈ ಹಿಡಿದು ಸಮಾಧಾನವಾಗುವವರೆಗೂ ಅತ್ತಳು. ಅಲ್ಲಿದ್ದ ಎಲ್ಲರು ನನ್ನತ್ತ ನೋಡಿದರು. ನಾನು ಆರ್ಯಾಳನ್ನು ನೋಡಿ ಸಂತೈಸಿ ಹಸೆಮಣೆಗೆ ಕರೆತಂದೆ. ಇಷ್ಟು ವ್ಯಯಿಸಿ ಮದುವೆ ಮಾಡುವಷ್ಟು ಅನುಕೂಲವಂತರಲ್ಲ ಆರ್ಯಾಳ ತಂದೆ. ಹುಡುಗ ಲಕ್ಷಣವಾಗೇ ಇದ್ದ. ಆದರು ಇವಳ ಅಳುವಿಗೆ ಕಾರಣ ತಿಳಿಯಲಿಲ್ಲ. ಇನ್ನು ಇಲ್ಲೇ ಇದ್ದರೆ ಮತ್ತೆ ಇವಳು ಅಳುತ್ತಾಳೆ, ಎಂದು ಊಟಕ್ಕೆ ಕೂತರೆ ಅವಳ ಅಳುವಿನ ಚಿತ್ರಣವೇ ಕಣ್ಣ ಮುಂದೆ ಕಾಣತೊಡಗಿತು. ಊಟ ಸೇರಲಿಲ್ಲ. ಅವಳಿಗೂ ತಿಳಿಸದೇ ಎದ್ದು ಬಂದೆ. ತಿಳಿದರೆ ಏನಾಗುತ್ತೆ ಅಂತ ನನಗೆ ಗೊತ್ತಿತ್ತು. “ಗಂಗಾ” ಮಾತೆಯ ಮೂಲ ಸ್ಥಾನವೇ ಇವಳ ಕಣ್ಣು. ಅಳುತ್ತಾಳೆ, ನನ್ನ ನೋಡಿದರೆ ಅಳುತ್ತಾಳೆ, ಒಂದೆರಡು ದಿನ ಕಳೆದು ಇವಳ ಮನೆಗೆ ಹೋದರಾಯಿತು. ಪಾಪ ಮುಂದೆ ಹೇಗೆ ಇರ್ತಾಳೋ ಏನೋ ? ಎನಿಸಿ ಮನೆ ಸೇರಿಕೊಂಡೆ.

ನನಗೆ ನನ್ನ ಪರೀಕ್ಷೆ ಸಮೀಪಿಸುತ್ತಿತ್ತು. ಆರ್ಯಾಳ ಮದುವೆಯಾಗಿ ಸುಮ್ಮರು ೪ ತಿಂಗಳು ಕಳೆದಿತ್ತು. ಫೋನಲ್ಲಿ ಮಾತಾಡಿ ತಿಂಗಳೇ ಕಳೆದಿತ್ತು. ಅವಳು ಹೊಸ ಮನೆಗೆ ಹೊಂದಿಕೊಳ್ಳಲಿ ಅನ್ನುವ ಉದ್ದೇಶದ ಜೊತೆಗೆ ನಾನು ನನ್ನ ವಿದ್ಯೆಯ ಕಡೆಗೂ ಗಮನ ಕೊಡಬೇಕಿತ್ತು. ಪರೀಕ್ಷೆ ಮುಗಿದ ದಿನವೇ ನಾನು ಅವಳನ್ನು ನೋಡಲು ಹೋದೆ. ಮನೆ ಮುಂದೆ ತರಕಾರಿ ಕೊಳ್ಳುತಿದ್ದ ಆರ್ಯ ನನ್ನ ನೋಡಿದ ಸಂಭ್ರಮದಲ್ಲಿ ತರಕಾರಿ ಬುಟ್ಟಿಯನ್ನು ಲೆಕ್ಕಿಸದೆ ಓಡಿ ಬಂದಳು. ತರಕಾರಿ ರಸ್ತೆಯಲೆಲ್ಲ ಹರಡಿತ್ತು. ಅಯ್ಯೋ ನೋಡಬಾರದಾ ತರಕಾರಿ ಎಲ್ಲ ಬೀಳಿಸಿದೆ ಎಂದರೆ ಅವಳಿಗೆ ಅದರ ಅರಿವೇ ಇಲ್ಲ. ನಾನೇನು ನಿನ್ನ ಗಂಡನಲ್ಲ ಕಣೆ ಕಂಡೊಡನೆ ಹೀಗೆ ಓಡಿಬರೋದಕ್ಕೆ ಎಂದು ತಮಾಷೆ ಮಾಡಿದೆ. ಆ ಮಾತು ಅವಳಿಗೆ ಹಿಡಿಸಲಿಲ್ಲವೆಂಬಂತೆ ತೋರಿತು. ಓಡಿ ಬಂದ ಆರ್ಯ ನನ್ನ ಕೈ ಹಿಡಿದಳು, ಆ ಹಿಡಿತ ತಪ್ಪಿ ಎಷ್ಟೋ ತಿಂಗಳೇ ಕಳಿದಿತ್ತು. ಅವಳನ್ನು ನೋಡಿದೆ, ಮೊದಲೇ ಪ್ರೌಢ ಕಳೆ, ಮದುವೆಯಾದ ಮೇಲೆ ಅದು ಕೊಂಚ ಜಾಸ್ತಿಯಾಗಿತ್ತು. ನನಗೆ ಸಂತೋಷವಾಯಿತು”. ಅಂತೂ ಬಲವಂತಕ್ಕೆ ಮದುವೆ ಆದರೂ ಖುಷಿಯಾಗಿದ್ದಾಳಲ್ಲ” ಅಂತಾ.  ನನ್ನ ನೋಡಿದ ಖುಷಿಗೆ ಮಾತೆ ನಿಲ್ಲಿಸುತ್ತಿಲ್ಲ. ಇಷ್ಟು ದಿನ ಬಾಕಿ ಉಳಿಸಿದ್ದ ಮಾತನ್ನು ಒಂದೇ ಉಸಿರಿಗೆ ಶುರುಮಾಡಿದಳು. ಈಗ ಆಶ್ಚರ್ಯ ಪಡುವ ಸಂಗತಿ ನನ್ನದಾಯಿತು. ನನ್ನ ಆರ್ಯ ಇವಳೇನಾ ಅಂತ? ಕೈಯಲ್ಲಿ ಕಾಫೀ ಹಿಡಿದು ನನ್ನ ಮುಂದೆ ಕುಳಿತ ಆರ್ಯಾಳನ್ನು “ಹೇಗಿದ್ದೀಯ?” ಎಂದೇ. ತಲೆ ತಗ್ಗಿಸಿ ಹೂಂ ಚೆನ್ನಾಗಿದ್ದೀನಿ ಅಂದಳು. ನನಗೇಕೋ ಅವಳು ಸುಳ್ಳು ಹೇಳುತ್ತಿದ್ದಾಳೆ ಎನಿಸಿತು. ಆದರು ಜಾಸ್ತಿ ಕೆದಕಿ ಅವಳಿಗೆ ನೋವು ಕೊಡುವುದು ನನಗೆ ಇಷ್ಟ ಇರಲಿಲ್ಲ. ಹೊರಟರೆ ಕಣ್ಣಲ್ಲಿ ಪ್ರಶ್ನೆ “ಮತ್ತೆ ಯಾವಾಗ ಬರ್ತೀಯ”? ಅಂತ. ನಾನು ಮುಖ ಕೊಟ್ಟು ಮಾತನಾಡಲಾಗದೆ ಮುಂದಿನ ವಾರ ಸಿಗೋಣ ಮತ್ತೆ ಎಲ್ಲಾದ್ರೂ ಹೊರಗೆ ಹೋಗೋಣ ಎಂದೇ. “ಹೊರಗಾ” ಅಂತ ಮತ್ತೆ ಆಶ್ಚರ್ಯ. ಅಯ್ಯೋ ತಾಯಿ ನಾನು ಕರೆದಿದ್ದು ಚಂದ್ರಮಂಡಲಕ್ಕಲ್ಲ ಕಣೆ, ಇಲ್ಲೆ ಎಲ್ಲಾದ್ರೂ ಹೋಗೋಣ ಆಯ್ತಾ ಎಂದೇ. ಇಲ್ಲ ನೀನೆ ಮನೆಗೆ ಬಾ ಸಿಗೋಣ ಎಂದಳು. ಮತ್ತೆ ಅವಳ ಮುಖ ತಿರುಗಿ ನೋಡುವ ಸಾಹಸ ಮಾಡಲಿಲ್ಲ. ನನಗೆ ಗೊತ್ತಿತ್ತು “ಗಂಗೆ” ಯ ಮೂಲಾ ಯಾವುದು ಅಂತಾ.

http://arento.com.ua/?how-to-write-an-explanatory-synthesis-essay ಹೀಗೆ ಸುಮಾರು ೫-೬ ತಿಂಗಳಲ್ಲಿ ನಾನೇ ಅವಳ ಮನೆಗೆ ಹೋಗಿ ಬರುತ್ತಿದ್ದೆ. ಅವಳು ಎಲ್ಲೂ ಬರುತ್ತಿರಲಿಲ್ಲ ಹಾಗು ಅವಳ ಅಪ್ಪ ಅಮ್ಮ ಬಂದು ಹೋಗಿದ್ದು ಇಲ್ಲ. ಸೂಕ್ಷ್ಮವಾಗಿ ನನಗನಿಸಿದ್ದು ಇವಳ ಸಂಸಾರ ನಾನಂದುಕೊಂಡಂತಿಲ್ಲ ಮತ್ತು ಇವಳು ಸುಖವಾಗಿಲ್ಲ. ಆದರೆ ಕೇಳೋದು ಹೇಗೆ? ಅಂತ ಯೋಚಿಸಿ ಕೊನೆಗೆ “ನಾವು ಕಾಲೇಜಿನ ಗೆಳತಿಯರೆಲ್ಲ ಪ್ರವಾಸಕ್ಕೆ ಹೋಗ್ತಿದ್ದಿವೆ ಕಣೆ. ನಿನ್ನ ಖರ್ಚಿನ ಬಗ್ಗೆ ಯೋಚನೆ ಬೇಡ. ಅದು ನಾನು ನಿಭಾಯಿಸ್ತೀನಿ. ಒಟ್ಟಿಗೆ ೪ ದಿನ ಇರೋಣ” ಎಂದಾಗ ೪ ದಿನಾನಾ? ಎಂದಳು. ಯಾಕೆ ಗಂಡನನ್ನು ಬಿಟ್ಟು ಬರೋಕೆ ಕಷ್ಟಾನಾ? ಪಾಪಾ ಎಂದೇ. ಅವಳ ಕಣ್ಣಲ್ಲಿ ಗಂಗೆ ಮತ್ತೆ ಹುಟ್ಟಿದಳು. ಬಿಟ್ಟು ಬರೋಕ್ಕೆ ಅಲ್ಲ ಕಣೆ ಆಮೇಲಿನದು ಎದುರಿಸೋಕ್ಕೆ. ಹಾಂ? ಏನೇ ಹಾಗೇಂದ್ರೇ. ಯಾರನ್ನೇ ಎದುರಿಸಬೇಕು? ಅತ್ತೆ ಮಾವ ಜೊತೆಲಿಲ್ಲ. ಅಪ್ಪ ಅಮ್ಮ ಬಗ್ಗೆ ನನಗೆ ಗೊತ್ತು ಎಂದೆ.

ಆಗ ಅವಳು ಹೇಳಿದ ಸಂಗತಿ ನನಗೆ ಬೇಸರ ತರಿಸಿತು.”ಗಂಡ ಕಣೆ, ನಾನು ಅವರಿಗೆ ಹೆದರಬೇಕು. ಮದುವೆಯಾದಾಗಿಂದಲೂ ಇದೆ ರೀತಿ. ನೀನು ಹೇಳಿದ ಹಾಗೆ ಓದಾದರೂ ಪೂರ್ತಿಯಾಗಿದ್ದರೆ ನನ್ನ ಕಾಲ ಮೇಲೆ ನಾನು ನಿಲ್ಲಬಹುದಿತ್ತು. ಅದು ಆಗಲಿಲ್ಲ. ಗಂಡನಿಗೆ ಎಲ್ಲದಕ್ಕೂ ಕೋಪ ಮತ್ತು ಯಾರೊಡನಿದ್ದರೂ ಅನುಮಾನ. ಯಾರೊಂದಿಗೂ ಬೆರೆಯಲು ಬಿಡುವುದಿಲ್ಲ.ಸಂಪ್ರದಾಯದ ಕಾರಣ ಮೊದಲಿಂದಲೂ ಮುಕ್ತವಾಗಿ ಯಾರೊಡನೆಯೂ ಬೇರೆಯಲಿಲ್ಲ. ಈಗ ಯಾರೊಂದಿಗೆ ಮಾತನಾಡಿದರು ಗಂಡನಿಗೆ ಅನುಮಾನ. ಅಪ್ಪ ಅಮ್ಮನಿಗೂ ಇಲ್ಲಿ ಬರಲು ಅನುಮತಿ ಇಲ್ಲ. ನಾನು ಹೊರ ಹೋಗುವುದು ದೂರದ ಮಾತೆ ಆಗಿದೆ. ಅದಕ್ಕೆ ಪ್ರತಿ ಬಾರಿಯೂ ನಿನ್ನನ್ನೇ ಮನೆಗೆ ಬರಲು ಹೇಳುವುದು” ಎಂದು ಕಣ್ಣೀರು ಒರೆಸಿಕೊಂಡಳು. ನನಗೆ ಇವಳು ಗಂಡನೊಂದಿಗೆ ಬಾಳುತ್ತಿದ್ದುದರ ಬಗ್ಗೆ ಅನುಮಾನವಿತ್ತು, ಇಂಥ ಮುಗ್ದೆಗೆ ಇಂಥ ಶಿಕ್ಷೆ. ನಾನೆಂದೇ “ಲೇ ಯಾವ ಕಾಲದಲ್ಲಿ ಇದ್ಯಾ, ಹೊರಗೆ ಹೋಗಿ ಪ್ರಪಂಚ ನೋಡು ಎಂಥೆಂಥ ಧೈರ್ಯವಂತರಿದ್ದರೆಂದು. ಬಾವಿ ಕಪ್ಪೆ ತರಹ ಮನೇಲೆ ಇದ್ಯಲ್ಲ, ನಿನಗೆ ನಿನ್ನದೇ ಆದ ಅಸ್ತಿತ್ವವೇ ಇಲ್ವೇನೇ? ಎಂದಾಗ ಆರ್ಯ ತಲೆ ತಗ್ಗಿಸಿದಳು. “ಏನು ತಪ್ಪು ಮಾಡಿದೆ ಅಂತ ತಲೆ ತಗ್ಗಿಸ್ತೀಯ? ಇರು ಇಂದು ನಿನ್ನ ಗಂಡನೊಡೆನೆ ಮಾತಾಡೇ ನಾನು ಮನೆಗೆ ಹೋಗೋದು ಎಂದ್ರೆ ಮಹಾತಾಯಿ ಕಣ್ಣಲಿ ” ತ್ರಿವೇಣಿ ಸಂಗಮ” ದ ಉಗಮವಾಯಿತು. ಅವಳ ಅಳು ನನ್ನಿಂದ ಸಹಿಸಲು ಆಗೊಲ್ಲಾ. ಸರಿ ಎಂದು ಮನೆಗೆ ಹೊರಟೆ. ಅವಳಿಗೆ ನನ್ನನು ತನ್ನ ಗಂಡನಿಂದ ತಪ್ಪಿಸುವ ಉದ್ದೇಶವಿತ್ತು. ನಂತರ ನಾನು ಒಂದು ತಿಂಗಳು ಅವಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವಳಿಂದಲೂ ಏನು ಸುದ್ದಿ ಇಲ್ಲ. ಏನಾಯ್ತೋ ಏನೋ ಎಂದು ಅವಳ ಮನೆಗೆ ಹೋದರೆ ಅದೇ ಆರ್ಯ, ನನ್ನ ನೋಡಿ ಸಂಭ್ರಮಿಸತೊಡಗಿದಳು. ಹೊಸ ಆಟಿಕೆ ಕಂಡ ಮಗುವಿನಂತೆ. ಮುಖದಲ್ಲಿ ಗೆಲುವು ಇರಲಿಲ್ಲ. ನನಗೆ ಸಂಕಟವಾಯಿತು. ಬಾ ಎಲ್ಲಾದರೂ ಹೊರಗೆ ಹೋಗಿ ಬರೋಣ ಏನು ಕಾರಣ ಹೇಳಬೇಡ, ನಿನ್ನ ಗಂಡ ಬರುವುದಕ್ಕೆ ಇನ್ನು ಸಮಯವಿದೆ ಎಂದರೆ ಅವಳು ಬೇಡ ಕಣೆ ಅಂತಾ ನನ್ನನು ಗೋಗರೆದಳು . ಥೂ! ಎಂಥ ಹುಡುಗಿಯನ್ನು ಕಟುಕನಿಗೆ ಕೊಟ್ಟರೋ. ಮೊದಲಿಂದಲೂ ಆರ್ಯ ಆಸೆ ಪಟ್ಟವಳೇ ಅಲ್ಲ, ಈಗಂತು ಇದ್ದ ಸಂತೋಷವನ್ನು ಇಲ್ಲದಂತಾಗಿಸಿಕೊಂಡಿದ್ದಾಳೆ ಎನ್ನಿಸಿತು. ಬೈದೆ “ಈ ಬಾಳಿಗೆ ಮದುವೆ ಯಾಕೆ ಬೇಕು? ನಿನ್ನ ಜೀವನಕ್ಕೆ ಏನಾದರೂ ಅರ್ಥ ಇದ್ಯಾ?” ಎಂದಾಗ ನಿನಗೆ ಗೊತ್ತಿಲ್ಲ ಕಣೆ ಇವರನ್ನು ಬಿಟ್ಟು ಹೋದರೆ ಅಪ್ಪ ಅಮ್ಮ ಮರ್ಯಾದೆ ಅಂತಾ ಪ್ರಾಣ ಕಳ್ಕೋತಾರೆ ಇನ್ನು ನನಗೆ ಇರೋ ಧೈರ್ಯಕ್ಕೆ ಒಬ್ಬಳೇ ಬಾಳುವುದಂತೂ ದೂರದ ಮಾತು ಎಂದಳು. ಸರಿ ಇವಳ ಗಂಡ ಬರುವ ಮುನ್ನ ಹೊರಡಬೇಕು ಎಂದು ಕೊಂಡು ಆರ್ಯಾಳ ಜೊತೆ ಅವಳ ಮನೆಯಲ್ಲಿ ಊಟ ಮಾಡಿ ಹೊರಟಾಗ ಬಾಗಿಲಲ್ಲಿ ನಿಂತ ಆರ್ಯ ಏನನ್ನೋ ಹೇಳಲು ತವಕಿಸುತ್ತಿದ್ದಳು. ಏನೇ? ಮತ್ತೆ ಮುಂದಿನ ವಾರ ಬರ್ತೀನಿ ಆಯ್ತಾ ಎಂದೇ, ಅದಲ್ಲ ಎಂದು ನಾಚಿದಳು. ಅಯ್ಯೋ ಇದ್ಯಾಕೆ ಹೇಗೇಗೋ ಆಡ್ತಿಯಾ ಎಂದಾಗ ಇನ್ನು ಏಳು ತಿಂಗಳಲ್ಲಿ ಪುಟ್ಟ ಆರ್ಯಾಳ ಆಗಮನದ ವಿಷ್ಯ ತಿಳಿಸಿದಳು. ಅಯ್ಯೋ ಕೋತಿ ಬಂದೊಡನೆ ಹೇಳುವ ಸಂತೋಷದ ವಿಷ್ಯಾನ ಹೊರಡುವಾಗ ಹೇಳ್ತ್ಯಾನೇ ಎಂದು ಅವಳನ್ನು ಸಂತೋಷದಿಂದ ನೋಡಿದೆ. ಅವಳು ವಿಷಯವನ್ನು ಅಪ್ಪ ಅಮ್ಮನಿಗೂ ತಿಳಿಸಿರಲಿಲ್ಲ. ತಿಳಿದರೆ ಮಗಳನ್ನು ನೋಡಲು ಬರುತ್ತಾರೆ ಅದು ಗಂಡನಿಗೆ ಇಷ್ಟವಿಲ್ಲ ಎಂದು. ಸರಿ ಹುಷಾರು ಮುಂದಿನ ವಾರ ಬರ್ತೀನಿ ಎಂದು ಹೊರಟೆ. “ಸದ್ಯ ಇನ್ನಾದರೂ ಸಂತೋಷದಿಂದಿರು ಎಲ್ಲ ಸರಿ ಹೋಗುತ್ತೆ ಎಂದಾಗ ಅವಳ ನಿಟ್ಟುಸಿರು ನನಗೆ ಕೇಳಿತು. ಅದರ ಅರ್ಥವು ನನಗೆ ತಿಳಿದಿತ್ತು.ಈ ಸಮಯದಲ್ಲಿ ಆ ಗಂಡ ಅಂತೂ ಇವಳನ್ನು ಗಮನಿಸುವುದು ನನಗೆ ತಿಳಿದಿತ್ತು. ಹಾಗಾಗಿ ನಾನು ಹಣ್ಣು ತಿಂಡಿ ಒಂದಿಷ್ಟು ಒಳ್ಳೆ ಪುಸ್ತಕ ಒಯ್ದರೆ ಆರ್ಯಾಳ ಮನೆಯಿಂದ ಅಳುವ ಶಬ್ದ. ಅವಳ ಗಂಡ ಅವಳನ್ನು ಹೀನಾಯವಾಗಿ ಬಯುತ್ತಿದ್ದ. ನಾನೇನು ಮಾಡೋಲ್ಲ ಅಂತಾ ಆ ನಿನ್ನ ಗಂಡುಬೀರಿ ಸ್ನೇಹಿತೆ ಜೊತೆ ಊರು ಸುತ್ತುತ್ತೀಯಾ? ಹೇಳು ಅವಳಿಗಂತೂ ಯಾರ ಭಯವು ಇಲ್ಲದೆ ಬೆಳೆದಿದ್ದಾಳೆ. ಅವಳ ಜೊತೆ ಸೇರಿ ನನ್ನ ಕಣ್ಣು ತಪ್ಪಿಸಿ ಏನೇನು ಆಟ ಆಡಿದ್ದಿರೋ? ಇನೊಮ್ಮೆ ಅವಳು ಮನೆಗೆ ಬರಲಿ ಅವಳಿಗೆ ಸರಿಯಾದ ಪಾಠ ಕಲಿಸುತ್ತೇನೆ. ಯಾರೇ ನಿನಗೆ ಆಗಬೇಕಾದವ್ರು ಗಂಡಾನೋ ಆ ಗಂಡುಬೀರಿಯೋ? ಎಂದಾಗ ಅಳುತ್ತ ಆರ್ಯ “ರೀ, ನನ್ನ ಏನಾದರೂ ಮಾಡಿ ಆದರೆ ಅವಳಿಗೆ ಏನು ಅನ್ನಬೇಡಿ. ನೀವು ಹೇಳಿದಂತೆ ಅಪ್ಪ ಅಮ್ಮನಿಗೂ ನಮ್ಮ ಮನೆಗೆ ಬರದಂತೆ ತಡೆದಿದ್ದೇನೆ. ಆದರೆ ಇವಳನ್ನು ನನ್ನಿಂದ ದೂರ ಮಾಡಬೇಡಿ. ಈಗ ಅವಳು ನನ್ನ ಈ ಸ್ಥಿತಿಯಲ್ಲಿ ನೋಡಿದರೆ ಎಷ್ಟು ನೊಂದುಕೊಳ್ಳುತ್ತಾಳೆ. ನೀವು ಹೇಳಿದ ಹಾಗೆ ಕೇಳ್ತೀನಿ”ದಯವಿಟ್ಟು ನಮ್ಮ ಮಧ್ಯ ಅವಳನ್ನು ಮಾತ್ರ ತರಬೇಡಿ ಎಂದು ಅಂಗಲಾಚುತ್ತಿದ್ದಳು. ನನಗೆ ಬಾಗಿಲು ತಳ್ಳಿಕೊಂಡು ಆರ್ಯಾಳನ್ನು ಕರೆತರುವಷ್ಟು ಕೋಪ. ಆದರೆ ನನ್ನನ್ನು ನೋಡಿ ಅವಳು ಇನ್ನು ಈ ಪರಿಸ್ಥಿತಿಯಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಎನಿಸಿ ಅಲ್ಲಿಂದ ಹೊರಟು ಬಂದೆ. ಕೊಂಚ ದಿನ ಕಳೆದು ಆರ್ಯಾಳನ್ನು ನೋಡಿದರಾಯಿತು ಎಂದು ಸಮಾಧಾನ ಮಾಡಿಕೊಂಡೆ. ಅಷ್ಟರಲ್ಲಿ ಕೆಲಸದ ನಿಮಿತ್ತ ಬೇರೆ ಊರಿಗೆ ಒಂದು ತಿಂಗಳ ಮಟ್ಟಿಗೆ ಹೋಗಬೇಕಾಗಿ ಬಂತು. ಆರ್ಯಗೆ ತಿಳಿಸೋದು ಬೇಡ ಹೇಗೋ ಒಂದು ತಿಂಗಳು ತಾನೇ ಎಂದು ಹೋದರೆ ಅದು ಐದಾರು ತಿಂಗಳು ಎಳೆಯಿತು. ನನಗಂತೂ ಮನಸೆಲ್ಲ ಆರ್ಯಾಳಲ್ಲೇ. ನಾನು ಬರುವ ವೇಳೆಗೇ ಆರ್ಯ “ಅದ್ವಿತಿ”ಯ ತಾಯಿಯಾಗಿದ್ದಳು. ವಿಷಯ ತಿಳಿದಾಕ್ಷಣ ಅವಳನ್ನು ನೋಡಲು ಹೋಗಲು ತಡೆದಿದ್ದ ಆರ್ಯಾಳ ಅಳು ಅವಳ ಗಂಡನ ಕುಹಕ ನುಡಿಗಳು ಎಲ್ಲ ಮರೆತು ಹೋದವು.

ಮಗು ಮುದ್ದಾಗಿತ್ತು. ಆದರೆ ಆರ್ಯಾಳಲ್ಲಿ ಕೊಂಚವೂ ಗೆಲುವಿರಲಿಲ್ಲ. ಕಾರಣ ಕೇಳಲಿಲ್ಲ. ಅಂತೂ ಆರ್ಯಾಳ ಮಗಳು ಮೊದಲ ನೋಟದಲ್ಲಿ ನನ್ನ ಸೆಳೆದಿದ್ದಳು. “ಅದ್ವಿತಿ”ಯದು ಅದೇ ರೂಪ, ಮುಗ್ಧ ಮುಖ, ಆಶ್ಚರ್ಯ ಸೂಸುವ ಕಣ್ಣು. ನನಗಂತೂ ಮಗು ಬಿಟ್ಟು ಹೊರಡಲು ಮನಸ್ಸೇ ಬರಲಿಲ್ಲ. ಸಂಜೆ ಆಗುತಿದ್ದಂತೆ ಆರ್ಯಾಳ ಕಣ್ಣು ಭಯದಿಂದ ಗಡಿಯಾರದಲ್ಲೇ ನೆಟ್ಟಿತ್ತು, ಇವಳು ಇನ್ನು ಬದಲಾಗುವುದು ಸಾಧ್ಯವೇ ಇಲ್ಲ. ಏನೋ ಮಗುವಿನೊಂದಿಗಾದರು ಸುಖವಾಗಿರಲಿ ಎಂದು ಹೊರಟೆ, ಬಾಗಿಲ್ಲಲ್ಲಿ ನಿಂತ ಆರ್ಯ “ತಪ್ಪು ತಿಳಿಬೇಡ ಕಣೆ ಇವರು ಮದುವೆಯಾದಾಗಿಂದಲೂ ಹೀಗೆ. ಯಾವುದೋ ಕಾರಣಕ್ಕೆ ಅಪ್ಪ ಅವರ ಮನೆಯವರಿಂದ ಸಹಾಯ ಪಡೆದಿದ್ದರು. ಹಾಗಾಗಿ ಇವರ ಮಾತಿಗೆ ಎದುರಾಡದೆ ನನ್ನ ಇವರಿಗೆ ಮಾರಿದರು. ನಮ್ಮ ಮನೆ ಬಡತನಕ್ಕೆ ನಾನು ನನ್ನ ಜೀವನ ತೆರಬೇಕಾಯಿತು. ಅವರು ಹೇಳಿದಂತೆ ನಾನು ಕೇಳಲೇಬೇಕು. ಆದರೂ ನೀನು ಇಷ್ಟು ದಿನ ಬರೆದೆ ಇದದ್ದು ಮಾತ್ರ ನನಗೆ ಬೇಸರವಾಯಿತು. ಏನು ಕಾರಣವೂ ಇಲ್ಲದೆ ನೀನು ನನ್ನ ತೊರೆದರೆ ನಾನು ಏನೇ ಮಾಡಲಿ?” ಎಂದಳು. ನಾನು ಕೆಲಸದ ಕಾರಣ ಕೊಟ್ಟು ಹೊರಬಂದೆ. ನನಗೆ ತಿಳಿದಂತೆ ಆರ್ಯಾಳ ಅಪ್ಪ ಅಮ್ಮನು ಅವಳನ್ನು ನೋಡುವುದಕ್ಕೆ ಅಳಿಯನ ಅನುಮತಿ ಪಡೆಯಬೇಕಿತ್ತು. ಛೇ, ಚಿನ್ನದಂತ ಹುಡುಗಿ , ಗಂಡ ಸರಿಯಾಗಿ ನೋಡಿಕೊಂಡರೆ ದಿನ ಅವನ ಕಾಲು ತೊಳೆದು ಪೂಜಿಸುತ್ತಿದ್ದಳು. ಅಂತ ಹೆಣ್ಣು. ಇಷ್ಟಾದರೂ ಕೋಪ ಇಲ್ಲ ಎಲ್ಲವನ್ನು ಸಹಿಸಿಕೊಳ್ಳುತ್ತಾಳೆ. ಆದರೆ ಇಷ್ಟು ಒಳ್ಳೆತನ ಒಳ್ಳೇದಲ್ಲ. ಇದೆ ಇವಳನ್ನು ಹಾಳು ಮಾಡುತ್ತಿದೆ. ಆದರೆ ಇವಳಿಗೆ ಎಷ್ಟು ಹೇಳಿದರು ತಿಳಿಯುವುದಿಲ್ಲ. ಸರಿ ಇನ್ನು ನಾನು ಅವಳ ಸಂಸಾರದ ವಿಷಯಕ್ಕೆ ತಲೆ ಹಾಕುವುದು ಸರಿ ಅಲ್ಲ ಎಂದು ಸುಮ್ಮನಾದೆ. ಆರ್ಯಳೇ “ದಿನಾ ಸಾಯೋರಿಗೆ ಅಳೋರು ಯಾರು” ನಮ್ಮ ಮನೇದು ದಿನಾ ಇದ್ದದ್ದೇ ಕಣೆ, ಆದರೆ ನೀನು ಮಾತ್ರ ನನ್ನ ನೋಡೋಕೆ ಬರೋದು ಬಿಡಬಾರದು ಎಂದಳು. ನಾನು ಸಹ ಎಷ್ಟೇ ಕಷ್ಟಾವಾದಾರು ವಾರೊಕೊಮ್ಮೆ ಬಂದು ತಾಯಿ ಮಗಳೊಡನೆ ಸಂತೋಷದಿಂದ ಕಾಲ ಕಳೆಯುತ್ತಿದ್ದೆ. ಆದರೆ ಒಮ್ಮೆಯೂ ನಾನು ತರುತ್ತಿದ್ದ ವಸ್ತುವನ್ನು ಪಡೆಯುತ್ತಿರಲಿಲ್ಲ. ಕಾರಣ ನಾನು ಬಂದು ಹೋಗುತ್ತಿದ್ದುದ್ದು ಅವಳ ಗಂಡನಿಗೆ ತಿಳಿಯಬಾರದು ಎಂದು. ಮಗುವಿಗಾದರು ಏನಾದರೂ ಕೊಡುವ ಆಸೆ . ಅದನ್ನು ಆರ್ಯ ತಡೆದಿದ್ದಳು, ನೀನು ಹೀಗೆ ಬಂದು ಹೋಗುತ್ತಿದ್ದಾರೆ ಅದೇ ನಮಗೆ ಉಡುಗೊರೆ ಕಣೆ, ನಿನ್ನ ಪ್ರೀತಿ ನಮ್ಮ ಮೇಲೆ ಹೀಗೆ ಇರಲಿ ಎಂದು ನನ್ನ ಬಾಯಿ ಮುಚ್ಚಿಸುತಿದ್ದಳು. ಎಂಥ ನಿಷ್ಕಲ್ಮಶ ಪ್ರೀತಿ.

ವರ್ಷಗಳು ದಿನಗಳಂತೆ ಉರುಳುತಿತ್ತು. ಆರ್ಯ ನನಗೆ ಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದಳು. “ನಿನ್ನ ಮದುವೆ ಒಂದು ನೋಡೋ ಆಸೆ ಕಣೆ ನನಗೆ” ಎಂದು ಹೇಳಿದಾಗ ನಾನು “ನೀನು ಮದುವೆ ಆಗಿ ಪಡ್ತಿರೋ ಸುಖ ಕಂಡಿದ್ದೀನಿ. ಆಸೆ ಅಂತೇ ಆಸೆ ನೀನೇನು ನನ್ನ ಅಜ್ಜಿನ ಈ ತರಹ ಹೇಳೋಕ್ಕೆ ಎಂದೇ. ಅಲ್ಲೇ ಆಡುತಿದ್ದ ಒಂದು ವರೆ ವರ್ಷದ ಅದ್ವಿತಿ ನನ್ನ ನೋಡಿ ನಕ್ಕಿತು. ನಾನು ಆರ್ಯಾಳಲ್ಲಿ ಹೇಳಿದೆ ನನ್ನ ಮದುವೆಗೆ “ಅದ್ವಿತಿ” ಸಿಂಗರಿಸಿಕೊಂಡು ಎಲ್ಲರನ್ನು ಸ್ವಾಗತಿಸಿ ಛತ್ರದ ತುಂಬೆಲ್ಲ ಓಡಾಡ್ಬೇಕು, ಅವಳು ಅಷ್ಟು ತಯಾರಾಗಲಿ ಅಲ್ಲಿವರೆಗೂ ನನ್ನ ಮದುವೆ ಬಗ್ಗೆ ನೀನು ಏನು ಹೇಳಬಾರದು ಎಂದು. ಅದಕ್ಕೆ ಆರ್ಯ ಹಾಗಿದ್ದರೆ ಇನ್ನಾರು ತಿಂಗಳ್ಲಲಿ ಅವಳನ್ನು ತಯಾರು ಮಾಡುತ್ತೀನಿ ಎಂದಳು. ” ನಿನ್ನ ಗಂಡ ಬಿಡಬೇಕಲ್ಲ” ಎಂಬ ಮಾತು ನಾಲಗೆ ತುದಿವರೆಗೂ ಬಂದರು ತಡೆದುಕೊಂಡೆ. ಪಾಪ ಅವಳ ಸಂತೋಷವನ್ನೇಕೆ ಹಾಳುಮಾಡುವುದು? ಇಬ್ಬರ ಜೊತೆ ಕಳೆಯಲು ಸಮಯ ಸಿಗುವುದೇ ಅಲ್ಪ, ಅದರಲ್ಲೂ ಇವ್ಳ ಗಂಡನ ವಿಷ್ಯ ನಂಗ್ಯಾಕೆ ಅಂತಾ.

ಇವಳ ಜೀವನದಲ್ಲಿ ಏನು ಏರುಪೇರಿರಲಿಲ್ಲ. ಇದ್ದ ಸ್ವಲ್ಪ ಸಮಾಧಾನವು ಆರ್ಯಾಳ ಪಾಲಿಗೆ ಸತ್ತಂತಿತ್ತು. ನನಗಾಗಿ ಕಾಯುವುದು ಅವಳ ಕೆಲಸ. ನಾನು ಹೇಳಿದೆ ಅಮ್ಮ ಮಗಳು ಸಂತೋಷವಾಗಿದ್ದರೆ ನಾನು ಬರುವುದು ಇಲ್ಲದಿದ್ದರೆ ಇಲ್ಲ ಅಂತ. ಆ ಭಯಕ್ಕೆ ನಾನು ಹೋಗುವ ದಿನ ಆರ್ಯ ಮುಖದಲ್ಲಿ ಸಂತೋಷ ತಂದುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆರ್ಯ ನಿಜವಾಗಿ ಚಿನ್ನದಂತ ಹುಡುಗಿ, ಅಪ್ಪ ಅಮ್ಮನ ಬಲವಂತಕ್ಕೆ, ಗಂಡನ ಹಿಂಸೆಗೆ ಸೋತಿದ್ದಳು. ಅವನಿಗೋ ಎಲ್ಲದರಲ್ಲೂ ಅನುಮಾನ, ಅವಳನ್ನು ಖರೀದಿಗೆ ಕೊಂಡಂತೆ ನಡೆಸಿಕೊಳ್ಳುತಿದ್ದನು. ತೀರಾ ಹೆಂಡತಿ ಎಂದು ಬೇಡ ಒಂದು ಹೆಣ್ಣು ಅನ್ನುವ ಕನಿಷ್ಠ ಸೌಜನ್ಯವೂ ಇರಲಿಲ್ಲ. ಮಗಳನ್ನು ಕಂಡರು ಅಷ್ಟೇ, ಮದುವೆ  ಇಷ್ಟವಿಲ್ಲದಿದ್ದರೆ ಬೇಡ ಇಂತಹ ಹುಡುಗಿಯ ಜೀವನ ಹಾಳು ಮಾಡಿದ್ದು ಮಾತ್ರ ನನಗೆ ಸಹಿಸಲ್ಲಾಗಲಿಲ್ಲ. ಈಗೀಗಂತೂ ಎಲ್ಲದಕ್ಕೂ ಕೋಪ, ನಾನು ಅವರ ಮನೆಗೆ ಹೋಗುವುದೇ ಅವನ ಕೋಪಕ್ಕೆ ಕಾರಣ. ಅವನಿಗೆ ಸಾಧ್ಯವಾದಷ್ಟು ಆರ್ಯಾಳನ್ನು ನನ್ನಿಂದ ದೂರವಿರಿಸಬೇಕೆಂಬುದೇ ಧ್ಯೇಯ . ನನಗೇನು ಅವರ ಸಂಸಾರ ಹಾಳು ಮಾಡಬೇಕೆಂಬ ಉದ್ದೇಶವಿರಲಿಲ್ಲ. ಸರಿ ನನ್ನಿಂದ ನನ್ನ ಆರ್ಯಾಳ ಜೀವನ ಒಡೆಯುವುದು ಬೇಡ ಎನ್ನಿಸಿ ನಾನೇ ಹೋಗುದನ್ನು ನಿಲ್ಲಿಸಿದೆ. ಆದರೆ ಆರ್ಯಾಳ ಮುಗ್ಧ ಮುಖ ಕಣ್ಣ ಮುಂದೆ ನಿಲ್ಲುತಿತ್ತು, ಅದ್ವಿತಿ ಆಟಗಳು ನನ್ನ ಸೆಳೆಯುತ್ತಿದ್ದವು. ಆದರೆ ಮಾಡುವುದಾದರೂ ಏನು? ಹೆಚ್ಚು ಕಡಿಮೆ ನಮ್ಮ ಸಂಪರ್ಕವೇ ಇಲ್ಲದಂತಾಯಿತು. ಹಾಗಾದರೂ ಗಂಡ ಹೆಂಡತಿ ಮಗುವಿನೊಂದಿಗೆ ಸಂತೋಷದಿಂದಿರಲಿ ಎಂದು.

ಆದರೆ ಇಂದು ಬೆಳಗ್ಗೆ ಬಂದ ಕರೆ ಈ ಕಹಿ ಸತ್ಯವನ್ನು ಹೇಳಿತ್ತು. ನನ್ನ ಆರ್ಯ ಇನ್ನಿಲ್ಲ. ನಾನು ಇದು ಭ್ರಮೆಯಾಗಿರಬೇಕು ಎಂದು ಭಾವಿಸಿದೆ ಆದರೆ ಅದು ನಿಜವಾಗಿತ್ತು. ಖಚಿತಪಡಿಸಿಕೊಳ್ಳುವುದಕ್ಕಾಗಿ ಮನೆಗೆ ಹೋದರೆ ಅದು ನಿಜವಾಗಿತ್ತು. ನನ್ನ ಆರ್ಯ ಹೆಣವಾಗಿದ್ದಳು. ಮನೆಗೆ ಬಂದವರೆಲ್ಲ”ಇವಳಿಗೇನಾಗಿತ್ತು? ಆತ್ಮಹತ್ಯೆ ಮಾಡಿಕೊಳ್ಳುವಂತದ್ದು, ದೇವರಂತಾ ಗಂಡ” ಎಂದು ಅವನತ್ತ ಎಲ್ಲರು ಕನಿಕರದಿಂದ ನೋಡುತಿದ್ದರು.

ನಾನು ಆರ್ಯಾಳತ್ತ ನೋಡಿದೆ ಅದೇ ನಗು ಮುಖ ಯಾರದೋ ನಿರೀಕ್ಷಣೆಯಲ್ಲಿದಂತಿತ್ತು. ನನಗೆ ತಿಳಿದಿತ್ತು ಅವಳು ನಿರೀಕ್ಷಿಸುತ್ತಿದ್ದು ನನ್ನನೇ. ಕೊಲೆಪಾತಕ ಗಂಡ ಅವಳನ್ನು ಅನುಮಾನಿಸಿ ಕೊಂದಿದ್ದ, ಎಲ್ಲ ಮಾಡಿ ಏನು ಮಾಡದಂತೆ ಕುಳಿತಿದ್ದ. ಅವಳ ಅಪ್ಪ ಅಮ್ಮ ಮೌನವಾಗಿ ರೋದಿಸುತಿದ್ದರು. ಆರ್ಯಾಳ ಜೀವನ ಕೇವಲ ಮೂರೂ ಗಂಟೆಯ ಸಿನಿಮಾದಂತೆ ಮುಗಿದಿತ್ತು

“ಅದ್ವಿತಿ” ಯಾ ಅಳು ನನ್ನ ಎಚ್ಚರಿಸಿತ್ತು. ಅದಕ್ಕೆ ಹಸಿವೆಯಾಗಿತ್ತು. ಶಾಸ್ತ ಸಂಪ್ರಾದಯ ಅಂತ ನೋಡಿದರೆ ತಾಯಿ ಹೆಣ ಒಪ್ಪವಾಗುವವರೆಗೂ ಮಗುವಿಗೆ ಏನು ಕೊಡುವಂತಿಲ್ಲ. ಆರ್ಯ ಇದ್ದಿದ್ದರೆ ಮಗುವನ್ನು ಹೀಗಿರಲು ಬಿಡುತ್ತಿರಲಿಲ್ಲ. “ಅದ್ವಿತಿ” ಯನ್ನು ನೋಡಿದೆ. ಅದೇ ಆಶ್ಚರ್ಯದ ಕಣ್ಣು ಅಮ್ಮನ ಪಡಿಯಚ್ಚು. ಅದಕ್ಕೆ ತಿನ್ನಲು ತಿಂಡಿ ಕೊಟ್ಟು ಒಂದು ಕಠಿಣ ನಿರ್ಧಾರಕ್ಕೆ ಬಂದೆ.

ಸಂಜೆ ಆರ್ಯಾಳ ಮನೆಗೆ ಹೋದಾಗ ಅವಳ ಅಪ್ಪ ಅಮ್ಮ ಕಣ್ಣೀರು ಸುರಿಸುತ್ತಿದ್ದರು. ಗಂಡ ಸಾಧುವಿನಂತಿದ್ದ. ಮಗುವನ್ನು ಕಾಣದೆ ಎಲ್ಲರು ನನ್ನತ್ತ ನೋಡಿದರು. ಆರ್ಯಾಳ ಕ್ಷೇಮಕ್ಕಾಗಿ ಇಷ್ಟು ದಿನ ನನ್ನಲ್ಲಿ ಹಿಡಿದಿಟ್ಟಿದ್ದ ಕೋಪ ಒಮ್ಮೆಲೇ ಸಿಡಿಯಿತು. ಎಲ್ಲರಿಗು ಕೇಳುವಂತೆ ಹೇಳಿದೆ “ಆರ್ಯ ಪಾಪದವಳು, ಅಪ್ಪ ಅಮ್ಮ ಮಾನಕ್ಕೆ ಹೆದರಿ ಪ್ರಾಣ ಕಳ್ಕೋತಾರೆ ಅಂತ ಇವನ ಜೊತೆ ಮದುವೆಯಾದಳು, ಈ ಗಂಡ ಅವಳನ್ನು ಎಷ್ಟು ಸುಖವಾಗಿ ಕಾಪಾಡಿದ ಅಂತ ನನಗೆ ಗೊತ್ತು. ದಿನಾ ದಿನವೂ ನೋವಲ್ಲಿ ಬೆಂದು ಕೊನೆಗೂ ಪ್ರಾಣ ಬಿಟ್ಟಳು. ನಿಜ ತಪ್ಪು ಅವಳದ್ದೇ, ಇವನೊಂದಿಗೆ ಇಷ್ಟು ದಿನ ಬಾಳಿದ್ದು ಆರ್ಯದೇ ತಪ್ಪು. ಇನ್ನು ಆರ್ಯಾಳ ಮಗುವಿನ ಅಧಿಕಾರ ನಿಮಗಾರಿಗೂ ಇಲ್ಲ. ಆರ್ಯ ಅಪ್ಪ, ಅಮ್ಮ ಅಥವಾ ಗಂಡ ಯಾರನ್ನೇ ಬಿಟ್ಟಿದ್ದರು ನಾನು ಅವಳ ಕೈ ಬಿಡುತ್ತಿರಲಿಲ್ಲ. ಈಗ ಅವಳ ಮಗಳನ್ನು ನಾನು ಸಾಕುತ್ತೇನೆ. ಇಂತ ಉಸಿರು ಕಟ್ಟಿಸುವ ಸಂಪ್ರದಾಯ, ಅನುಮಾನಿಸುವ ಜನರ ಮಧ್ಯೆ ಮಗು ಬೆಳೆಯುವುದು ಬೇಡ. ಆರ್ಯಾಳ ಅಮ್ಮನತ್ತ ತಿರುಗೆ “ಅಮ್ಮ ನೋಡಿ ಈ ಮಗುವನ್ನು ನನ್ನ ಮಗು ಅಂತ ಸಾಕ್ತಿನಿ. ಅದಕ್ಕಾಗಿ ನಾನು ನನ್ನ ಜೀವ ಮುಡಿಪಾಗಿಡುತ್ತೇನೆ. ನನ್ನ ಜೀವದಂತಿದ್ದ ನಾನಗಾಗಿ ಹಂಬಲಿಸುತ್ತಿದ್ದ ನನ್ನ ಸ್ನೇಹಿತೆಯನ್ನಂತೂ ನೀವೆಲ್ಲ ಸೇರಿ ಇಲ್ಲವಾಗಿಸಿದಿರಿ. ಆರ್ಯ ತಂದೆ ತಾಯಿಯ ಆಸೆಗೆ ತನ್ನ ಜೀವವನ್ನು ಹಂತ ಹಂತವಾಗಿ ಆಹುತಿ ಕೊಟ್ಟು ಗಂಡನ ಅನುಮಾನಕ್ಕೆ ಪೂರ್ಣಾಹುತಿಯಾದಳು. ಇನ್ನು ಮುಂದೆ ಅದ್ವಿತಿಯಲ್ಲಿ ಆರ್ಯ ಛಾಪು ಮೂಡದಂತೆ ಬೆಳೆಸುತ್ತೇನೆ.

ಅಮ್ಮ, ಆರ್ಯಳಂತ ಮಗಳನ್ನು ಪಡೆಯುವುದಕ್ಕೆ ಪುಣ್ಯವಿರಬೇಕು. ನಿಮಗಿತ್ತು, ಉಳಿಸಿಕೊಳ್ಳಲಾಗಲಿಲ್ಲ. ನಿಮಗೆ ತಿಳಿದಿಲ್ಲ ಅಮ್ಮ, ನೀವು ಅವಳ ಮದುವೆ ನಂತರ ಅವಳನ್ನು ಎಷ್ಟು ಬಾರಿ ಕಾಣಲು ಬಂದಿದ್ದೀರೆಂದು? ನಾನು ಇವಳ ಈ ಪಾಪಿ ಗಂಡನ ಕಣ್ಣು ತಪ್ಪಿಸಿ ಬಂದು ಆಕೆಗೆ ಸಮಾಧಾನ ಮಾಡುತಿದ್ದೆ. ಮದುವೆಯ ನಂತರವು ಅವಳು ಇಷ್ಟು ದಿನ ಬದುಕಿದ್ದರೆ ಅದಕ್ಕೆ ಕಾರಣ ನನ್ನ ಮತ್ತು ಅವಳ ಸ್ನೇಹ. ಈ ಕೆಟ್ಟ ಬಾಳು ಅದ್ವಿತಿಗೆ ಬೇಡ. ಆರ್ಯಾಳ ಮುಗ್ಧ ಭಾವನೆ ಅವಳಲ್ಲೇ ಮುಗಿಯಲಿ. ಅದರ ಲವಲೇಶವೂ ಅದ್ವಿತಿಗೆ ತಟ್ಟದಂತೆ ಬೆಳೆಸುತ್ತೇನೆಂದು ಅವರ ಉತ್ತರಕ್ಕೂ ಕಾಯದೆ ಹೊರನಡೆದೆ. ಬೆಳಗಿನಿಂದ ತಡೆದಿದ್ದ ಅಳು ಈಗ ಶುರುವಾಯಿತು. ಅತ್ತಿದಷ್ಟೇ ಮನಸ್ಸೇನು ಹಗುರಾಗಲಿಲ್ಲ. ಅದು ಹಗುರಾಗುವ ವಿಷಯವು ಆಗಿರಲಿಲ್ಲ.

ಮನೆ ಮುಟ್ಟುವ ಹೊತ್ತಿಗೆ ಮನೆ ಕೆಲಸದವಳು ಅದ್ವಿತಿಗೆ ಸ್ನಾನ ಮಾಡಿಸಿ ಆಟ ಆಡಿಸುತ್ತಿದ್ದರು. ಅದ್ವಿತಿಯ ಸಂತಸದ ಮುಖ ನನಗೆ ಆರ್ಯಾಳ ನೆನಪಿಸಿತ್ತು. ಅದು ತೊದಲುತ್ತ “ಅಮ್ಮ” ಎಂದಾಗ ಕರುಳು ಹಿಂಡಿದಂತಾಗಿ “ಕಂದಾ ಇನ್ನು ಮುಂದೆ ನಾನೇ ನಿನಗೆ ಅಮ್ಮ” ಎಂದೇ . ಅರ್ಥವಾಗದೆ ಅದು ಪಿಳಿ ಪಿಳಿ ಕಣ್ಣು ಬಿಡುತ್ತ ನನ್ನತ್ತ ನೋಡಿತು. “ಅದ್ವಿತಿ”ಯನ್ನು ಅದ್ವಿತೀಯಳಾಗಿ ಮಾಡುವ ಕನಸು ನನ್ನ ಕಣ್ಣ ಮುಂದಿತ್ತು ಆದರೆ ಆರ್ಯ ಕಣ್ಮರೆಯಾಗಿದ್ದಳು.

5 thoughts on “ಪೂರ್ಣಾಹುತಿ

  1. ಶ್ರುತಿ ವಸಿಷ್ಠ ಅವರೇ ನಿಮ್ಮ
    “ಪೂರ್ಣಾಹುತಿ ” ಕತೆಯನ್ನ ವೆಬತನದಲ್ಲಿ ಪ್ರಕಟವಾದ ದಿನದಿಂದ ಇದುವರೆಗೂ6 ಬಾರಿ ಓದಿದಿನಿ , ನಿಮ್ಮ ನಿರೂಪಣಾ ಶೈಲಿ ಅಗಾದವಾದ ಶಬ್ದ ಬಂಡಾರ ಹಾಗು ನೀವು ಕತೆ ಯನ್ನ ಕಟ್ಟಿಕೊಟ್ಟ ರೀತಿ ಇಂದ ಆರ್ಯ ಎಲ್ಲೊ ನಮ್ಮ ಪಕ್ಕದಲ್ಲೇ ಇರುವ ಹುಡುಗಿ ಅನಿಸಿತು … ಒಬ್ಬ ಓದುಗನು ಲೇಖಕರ ಕಲ್ಪನೆ ಪಾತ್ರವನ್ನ ಯಾವಾಗ ನೈಜ ಪಾತ್ರವೆಂದು ನಂಬುತಾನೋ ಅದುವೇ ಬರಹಗಾರರ ನಿಜವಾದ ಗೆಲುವು ಅಹ ನೆಲೆಯಲ್ಲಿ ನೀವೊಬ್ಬರು ಅದ್ಭುತವಾದ ಲೇಖಕಿ..

  2. The well written story makes me emotional and it touches the heart of every reader.
    Moreover the story gives a strong message to the society that every girl should be educated to stand on her own so that this kind of women harassment can be avoided to a greater extent.
    Keep going Shruti…

  3. ಈ ಕರುಣಾಜನಕ ಕತೆಯಲ್ಲಿ ಆರ್ಯ ನಮ್ಮ ಸಮಾಜದ ಪ್ರತಿಯೊಂದು ಹೆಣ್ಣಿನ ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಓದಿ ಅತ್ತಿದ್ದೇನೆ. ಯಾರಿಗೂ ಆರ್ಯಳ ಪರಿಸ್ಥಿತಿ ಬಾರದಿರಲಿ. ನಿಮ್ಮ ಕಥೆಯಯಲ್ಲಿನ ಅಸಹಾಯಕ ಸ್ಥಿತಿ, ಮತ್ತೆ ಚಾಚುವ ನೆರವಿನ ಹಸ್ತ ಸಮಾ ಜದಲ್ಲಿ ಬದಲಾವಣೆ ಯನ್ನು ತರಲಿ.

Leave a Reply

Top