You are here
Home > ಪುಟ ೧ > ಮರೆಯುವೆನೆಂದರೂ ಬಿಡಲೊಲ್ಲದ ಹೈಸ್ಕೂಲು ನೆನಪುಗಳು! – ಪಾರ್ವತೀಸುತ

ಮರೆಯುವೆನೆಂದರೂ ಬಿಡಲೊಲ್ಲದ ಹೈಸ್ಕೂಲು ನೆನಪುಗಳು! – ಪಾರ್ವತೀಸುತ

go to link ‘ಜೀವನವೇ ಒಂದು ಬಸ್ಸಿನಂತೆ. ನಮ್ಮ ಸ್ಥಳ ಬಂದಾಗ. ನಾವು ಇಳಿದುಕೊಳ್ಳಬೇಕು.’ ಅನ್ನುವ ಮಾತುಗಳೆಲ್ಲ ಮೊದಲು ಅರ್ಥವೇ ಆಗುತ್ತಿರಲಿಲ್ಲ. ಅದೊಂದು ವೇದಾಂತದಂತೆಯೋ, ಯಾರೋ ಗೀಚಿಟ್ಟ ವಾಕ್ಯದಂತೆಯೋ ಅನ್ನಿಸಿಬಿಡುತ್ತಿತ್ತು. ಆದರೆ ಅದರ ಅರ್ಥ ನಮಗೆ ಸರಿಯಾಗಿ ಗೊತ್ತಾಗಿದ್ದು ನಮ್ಮ ಪ್ರೌಢಶಾಲೆ ನಮ್ಮನ್ನೆಲ್ಲಾ ಪ್ರೀತಿಯಿಂದ ಬೀಳ್ಕೊಟ್ಟಿತ್ತಲ್ಲ, ಪರೀಕ್ಷೆ ಬರೆಯಲು ಹೊರಟಿದ್ದ ನಮಗೆಲ್ಲಾ  ಆತ್ಮವಿಶ್ವಾಸವೆಂಬ ಇಂಧನ ತುಂಬಿ ಬಿಳ್ಕೋಟ್ಟಿತ್ತಲ್ಲ, ಅದೇ ದಿನದಂದು! ಆ ದಿನವಾಗಿ ಇವತ್ತಿಗೆ ಒಂದು ವರ್ಷ.

ಹೈಸ್ಕೂಲು ಜೀವನವೆಲ್ಲಾ ಇನ್ನು ಬರಿಯ ನೆನಪು ಎಂಬ ಕಟುಸತ್ಯವನ್ನು ಒಪ್ಪಿಕೊಳ್ಳಲು ಸಾಮಾನ್ಯವಾಗಿ ಎಲ್ಲರ ಮನಸ್ಸೂ ಆ ದಿನ ಹಠ ಮಾಡಿಯೇ ಮಾಡಿರುತ್ತದೆ.  ನನಗಿನ್ನೂ ನೆನಪಿದೆ. ಬೀಳ್ಕೊಡುಗೆ ಸಮಾರಂಭವೆಲ್ಲಾ ಮುಗಿದು, ಎಲ್ಲರೂ ಮನೆಗೆ ತೆರಳಲು ನಿಂತಾಗ, ಶಾಲೆಯ ಗೇಟಿನ ಬಳಿ ಗೆಳೆಯನ ಜೊತೆ ನಿಂತುಕೊಂಡು ಒಮ್ಮೆ ಹಳೆಯ ನೆನಪುಗಳ ಸುರುಳಿ ಬಿಚ್ಚಿದೆ.  8 ನೇ ತರಗತಿಗೆ ಬಂದಾಗ ಆಂಗ್ಲ ಶಬ್ದಗಳು ನನಗೆ ಕೊಟ್ಟ ಕಾಟ, ಒಲ್ಲದ ಮನಸ್ಸಿನಿಂದ ತೃತೀಯ ಭಾಷೆಯಾಗಿ ಸಂಸ್ರೃತವನ್ನು ತೆಗೆದುಕೊಂಡಿದ್ದು, ನಂತರ 2 ತಿಂಗಳಿನಲ್ಲಿ ಶಾಲೆಯವರೇ ಸಂಸ್ಕೃತ ಕಿತ್ತೊಗೆದು ಹಿಂದಿಯನ್ನು ತೃತೀಯ ಭಾಷೆಯಾಗಿ ಓದಬೇಕಾದಾಗ ‘ಸಂಸ್ಕೃತವೇ ಪರವಾಗಿಲ್ಲವಾಗಿತ್ತು’ ಅಂತ ಅನಿಸಿದ್ದು,  ಗಣಿತದಲ್ಲಿ ಅಂಕಗಳು ಏಕಾಏಕಿ ಕೆಳಮುಖವಾದದ್ದು, ಸೋಷಿಯಲ್ ಟೀಚರ್ ತುಂಬಾ ಚೆನ್ನಾಗಿ ಪಾಠ ಮಾಡಿದಾಗಲೂ ನಿದ್ದೆಯಿಂದ ತೂಕಡಿಸಿದ್ದು, “ಇವರಿಗೆ ಕನ್ನಡ ಭಾಷೆಯನ್ನ ಕಲಿಕಾ ಭಾಷೆಯಾಗಿ ಇಡುವ ಬದಲು ಸಂಸ್ಕೃತ ವನ್ನು ಇಟ್ಟಿದ್ದರೆ ನಮ್ಮ ಸಂಸ್ಕೃತಿ ಉಳಿಯುತ್ತಿತ್ತು, ಸ್ಕೋರೂ ಆಗುತ್ತಿತ್ತು” ಅಂತ ಪರಿಚಯಸ್ತರೋರ್ವರು ಹೇಳಿದಾಗ ಬಂದ ಸಿಟ್ಟನ್ನು ತೋರ್ಪಸಲಾಗದೆ ಅವಡುಗಚ್ಚಿ ನಿಂತಿದ್ದು, 10ನೇ ಕ್ಲಾಸಿನಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಯಕ್ಷಗಾನ ಭಾಗವತಿಕೆ ಮಾಡಿದಾಗ ” ಪರವಾಗಿಲ್ಲ, ಚೆನ್ನಾಗೇ ಹಾಡ್ತಾನೆ” ಅಂತ ಹೊಗಳಿಸಿಕೊಂಡಿದ್ದು, ಶಾಲೆಯಲ್ಲಿ ಒಂದೆರಡು ಭಾವಗೀತೆಗಳನ್ನು ಹಾಡಿ “ಚೆನ್ನಾಗಿ ಹಾಡ್ತೀಯ ಕಣೋ” ಅಂತ ಗೆಳೆಯರೇ ಬಿರುದು ಕೊಟ್ಟಿದ್ದು, ಪಾಠ ಬೋರಾದಾಗ ಗೆಳೆಯ ಕೊಟ್ಟ ಚಾಕ್ಲೇಟು ನುಂಗಿದ್ದು, ಲೆಕ್ಕವನ್ನು ಎಲ್ಲರಿಗಿಂತ ಮೊದಲು ಮಾಡಿ ಟೀಚರ್ರಿಂದ “ಭೇಷ್” ಅನಿಸಿಕೊಂಡು ಬೀಗಿದ್ದು, ನಮ್ಮ ಶಾಲೆಗೆ ವಿಲಾಯತಿಯಿಂದ  ಹೊಸ ಹುಡುಗ ಅವೇಜ್ ಬಂದಾಗ ‘ಆತನಿಂದ ಇಂಗ್ಲೀಷ್ ಕಲಿತುಕೊಳ್ಳಿ’ ಅಂದಿದ್ದ ಆ ಮಿಸ್ಸೇ ಆಶ್ಚರ್ಯ ಪಡುವಂತೆ ಬರೀ 6 ತಿಂಗಳುಗಳಲ್ಲಿ ಆತನಿಗೆ ಕನ್ನಡವನ್ನು ಕಲಿಸಿಕೊಟ್ಟಿದ್ದು, ಆ ದಿನಗಳಲ್ಲಿ ನಾನು ಹೆಣೆದಿದ್ದ ಬಣ್ಣ ಬಣ್ಣದ ಕನಸುಗಳು, ಗೆಳೆಯನ ಜೊತೆ ಕಂಡ ಯಕ್ಷಗಾನ, ಗೆಳೆಯರ ಜೊತೆ ಕ್ರಿಕೆಟ್ ಆಡುವಾಗ ಸಾಕ್ಷಾತ್ ತೆಂಡೂಲ್ಕರಿನ ಅಪರಾವತಾರ ನಾನು ಅನ್ನುವ ರೀತಿಯಲ್ಲಿ ವರ್ತಿಸಿದ್ದು, ಕನ್ನಡ ಪೀರಿಯಡ್ಡಿನಲ್ಲಿ ಪಟ್ಟಾಗಿ ಕುಳಿತು ಪಾಠ ಕೇಳಿದ್ದು, ಕ್ಲೋಜು ಫ್ರೆಂಡಿನ ಬಳಿ ಹಂಚಿಕೊಂಡ ಗುಟ್ಟು ಎಲ್ಲವೂ ಕೂಡ ಒಮ್ಮೆ ಕಣ್ಮುಂದೆ ಹಾದು ಹೋಯಿತು. ಪಕ್ಕದಲ್ಲೇ ನಿಂತಿದ್ದ ಗೆಳೆಯ ” ನಾವೆಲ್ಲ ಇನ್ಮುಂದು ಸಿಗೋದೇ ಇಲ್ಲ, ಅಲ್ವೇನೋ?” ಅಂತ ತೀರಾ ಮಗು ಕೇಳಿದ ಹಾಗೆ ಕೇಳಿದ. “ವಾಟ್ಸಾಪ್ಪು, ಫೇಸ್ಬುಕ್ಕಿನ ಕಾಲದಲ್ಲಿಯೂ ಈ ಮಾತನ್ನು ಹೇಳ್ತಿಯಾ? ಫೋನಿನ ಮೂಲಕ ಸಂಪರ್ಕದಲ್ಲಿರೋಣ ಬಿಡೋ” ಅಂದೆ. ಅದಕ್ಕವನು ” ಅದೇನೆ ಅದರೂ ನಾವು ಮೊದಲಿನಂತಿರಲು ಸಾಧ್ಯವಾಗುವುದಿಲ್ಲ, ನಾವು ಮಾಡಿದ ಮೋಜು, ಅನುಭವಿಸಿದ ಖುಷಿ, ಇವೆಲ್ಲ ಬರೀ ನೆನಪಿನ್ನು” ಅಂದವನೇ “ಕೊನೆಯಸಲ ಕೈಕುಲುಕುತ್ತೇನೆ” ಅಂತ ಕೈಕುಲುಕಿ ಮುನ್ನಡೆದ. ನಾನು ಅವನ ಬೆನ್ನನ್ನೇ ನೋಡುತ್ತ ನಿಂತಿದ್ದೆ. ಆತ ದೂರ ಹೋದಂತೆಲ್ಲಾ ದೃಷ್ಟಿ  ಮಸುಕು ಮಸುಕಾದಂತಾಗಿತ್ತು. ಕನ್ನಡಕದ ಗ್ಲಾಸು ಕೊಂಚ ಒದ್ದೆಯಾಗಿತ್ತು

Leave a Reply

Top