You are here
Home > ವೇದವಾಕ್ಯ > ಮೌನದೊಡಲಿನ ಮಾತು

ಮೌನದೊಡಲಿನ ಮಾತು

click ಅದೊಂದು ಭಾನುವಾರ,  ಯಾವುದೋ ಕೆಲಸದ ನಿಮಿತ್ತ ಮೆಜೆಸ್ಟಿಕ್ ಕಡೆ ಹೊರಟಿದ್ದೆ. ವೈಟ್ ಫೀಲ್ಡ್ ನಿಂದ ಮೆಜೆಸ್ಟಿಕ್ ವರೆಗೆ ಹೋಗಬೇಕೆಂದರೆ ಏಳು ಸಮುದ್ರ ದಾಟಿದ ಅನುಭವನೇ. ಆವತ್ತು ಬಸ್ಸಿಗಾಗಿ ಕಾದು ಸುಸ್ತಾಗಿ, ಬಂದ ವೋಲ್ವೋ ಬಸ್ಸನೇರಿದೆ. ಬಸ್ ಖಾಲಿ ಇತ್ತಾದರೂ ಹಿಂದಿನ ಬಾಗಿಲ ಬಳಿ ಇರುವ ಎತ್ತರದ ಕಿಟಕಿ ಸೀಟಿನಲ್ಲಿ ಕುಳಿತು, ರೂಮಿನಿಂದ ಹೊರಡೋಕೂ ಮುನ್ನ ಅರ್ಧಂಬರ್ಧ ಓದಿಟ್ಟ ಸುಧಾ ಮೂರ್ತಿಯವರ ‘ಮನದ ಮಾತು’ ಪುಸ್ತಕ ಹಿಡಿದು ಓದತೊಡಗಿದೆ.ಬೆಳಿಗ್ಗೆ ಬೇಗನೆ ಹೊರಟಿದ್ದರಿಂದಲೋ, ಕಂಪೆನಿಗಳಿಗೆ ರಜಾ ಇದ್ದದ್ದರಿಂದಲೋ ಬೇರೆ ದಿನಗಳಿಗೆ ಹೋಲಿಸಿದರೆ ಟ್ರಾಫಿಕ್ ಸ್ವಲ್ಪ ಕಮ್ಮಿನೆ ಇತ್ತು. ಆದರೂ ಮಾರತಳ್ಳಿ ಹತ್ತಿರ ಕೆಲವು ನಿಮಿಷಗಳ ಕಾಲ ನಾನಿದ್ದ ಬಸ್ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿತು. ಆಗಲೇ ಪುಸ್ತಕದೊಳಗಿಂದ ಕಣ್ಣುಕಿತ್ತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದ್ದು.ಬಸ್ಸಲ್ಲಿ ಅಬ್ಬಬ್ಬ ಅಂದರೆ ಹತ್ತು ಜನ ಇದ್ದಿರಬೇಕು. ಆಗಲೆ ಕಣ್ಣಿಗೆ ಬಿದ್ದದ್ದು ಡ್ರೈವರ್ ಹಿಂದುಗಡೆಯ ಎದುರು ಬದುರು ಸೀಟಿನಲ್ಲಿ ಕುಳಿತಿದ್ದ ತಾಯಿ ಮಗು.ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಕೂತು ಆಟವಾಡುತ್ತಾ ನಗುತ್ತಾ ತಮ್ಮ ಪ್ರಪಂಚದಲ್ಲೇ ಕಳೆದುಹೋಗಿದ್ದರು. ಐದು ವರ್ಷದ ಮಗುವಿರಬೇಕು ಅದು. ಅವರನ್ನ ಸೂಕ್ಷ್ಮವಾಗಿ ಗಮನಿಸಿದಾಗಲೇ ಗೊತ್ತಾಗಿದ್ದು ಇಬ್ಬರೂ ಸನ್ನೆ  ಭಾಷೆಯಲ್ಲಿ ಮಾತನಾಡುತ್ತಿದ್ದರು. ಹಾಗಾದರೆ ಇಬ್ಬರಲ್ಲಿ ಒಬ್ಬರಿಗೆ ಮಾತು ಬರಲ್ಲ,   ಇಲ್ಲಾ ಇಬ್ಬರಿಗೂ ಬರಲ್ಲ ಅಂದುಕೊಳ್ಳುತ್ತಾ ಕೈಯಲ್ಲಿದ್ದ ಪುಸ್ತಕ ಮಡಚಿಟ್ಟು ಅವರನ್ನೇ ನೋಡುತ್ತಾ ಕುಳಿತೆ. ಮಗು ತುಂಬಾ ಚೂಟಿಯಾಗಿತ್ತು. ಮಾತೊಂದಿಲ್ಲವಾದರೂ ಅವರ ಆಟ ಹಾಗೂ  ಭಾವನೆಗಳ ವಿನಿಮಯಕ್ಕೆ ಅದು ತೊಡಕಾಗಿರಲಿಲ್ಲ. ಒಬ್ಬರಿಗೊಬ್ಬರು ಕಚಗುಳಿ ಇಡುತ್ತಾ, ಕಿಟಕಿಯ ಹೊರಗಡೆ ಕಾಣಿಸುತ್ತಿದ್ದ ದೃಶ್ಯಗಳನ್ನು ತೋರಿಸಿಕೊಂಡು ಅವರ ಸನ್ನೆಯ ಭಾಷೆಯಲ್ಲಿ ಏನೇನೋ ಹೇಳಿಕೊಳ್ಳುತ್ತಾ… ಹೀಗೆ ಮುಂದುವರಿದಿತ್ತು. ಆಗಲೇ ನೆನಪಿಗೆ ಬಂದದ್ದು ಒಂದೆರಡು ತಿಂಗಳ ಹಿಂದೆ ಮತ್ತೆ ಬಸ್ಸಿನಲ್ಲೇ ನೋಡಿದ ಕಾಲೇಜು ವಿದ್ಯಾರ್ಥಿನಿಯರು. ಒಂದು ೫-೬ ವಿದ್ಯಾರ್ಥಿನಿಯರಿದ್ದರು,ಅಂದು ಪಿರಿಪಿರಿಗುಟ್ಟುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ನಲ್ಲಿ ನಿಂತಿದ್ದ ಬಸನ್ನೇರಿದ್ದರು. ಸ್ವಲ್ಪ ನೆನೆದಿದ್ದ ಅವರು ಬಸ್ ಹತ್ತಿ ಸಾವರಿಸಿಕೊಳ್ಳುವ ಮುನ್ನವೇ ಡ್ರೈವರ್ ಕಮ್ ಕಂಡಕ್ಟರ್ ಆಗಿದ್ದ ಬಸ್ ನ ಚಾಲಕ ಎಲ್ಲಿಗ್ರಮ್ಮ ಟಿಕೆಟು  ಎಂದು ಕೇಳಿದರೂ ಉತ್ತರಿಸದ ಹುಡುಗಿಯರ ಮೇಲೆ ಗದರಿಯೇಬಿಟ್ಟ. ” ಟಿಕೆಟ್ ತಗೊಳ್ಳಿ ಅಂದ್ರೆ ಅರ್ಥ ಆಗಲ್ವ, ಏನ್ ಜನಗಳೋ” ಅಂತ ಮುಂದೆ ನೋಡುತ್ತಾ ಬಸ್ ಓಡಿಸುತ್ತಲೇ ಬೈದುಕೊಂಡ. ಈ ಹುಡುಗಿಯರು ಅವನ ಹಿಂದೆನೇ ಬ್ಯಾಗ್ ತಡಕಾಡುತ್ತ ನಿಂತಿದ್ದರು. ಕೊನೆಗೂ ಕೈಗೆ ಸಿಕ್ಕ ಸ್ಟುಡೆಂಟ್ ಪಾಸ್ಗಳನ್ನ ತೋರಿಸಿದಾಗಲೇ ಡ್ರೈವರ್ ಸಿಟ್ಟು ಚೂರು ತಣ್ಣಗಾಗಿದ್ದು. ಬಸ್ ನಲ್ಲಿ ಎರಡು ಸೀಟುಗಳು ಖಾಲಿ ಇದ್ದದ್ದರಿಂದ ಮತ್ತುಳಿದವರು ನಿಂತೆ ಇದ್ದರು. ನನ್ನ ಸೀಟಿನ ಪಕ್ಕದಲ್ಲೇ ನಿಂತಿದ್ದ ಇಬ್ಬರ ಬೆನ್ನಲ್ಲಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹಿಡಿದು ಕುಳಿತೆ. ಅಲ್ಲಿಯವರೆಗೂ ಮೌನವಾಗಿದ್ದ ಹುಡುಗಿಯರ ಮೂಕ ಕಲರವ ಶುರುವಾಯಿತು ನೋಡಿ. ಅಲ್ಲಿರುವ ಯಾರಿಗೂ ಮಾತು ಬರಲ್ಲ ಅಂತ ಆವಾಗ್ಲೆ ಗೊತ್ತಾಗಿದ್ದು. ಕೈಗಳನ್ನು ಗಾಳಿಲಿ ಆಡಿಸುತ್ತಾ,  ಮುಖದ ಭಾವಗಳನ್ನು ಬದಲಾಯಿಸುತ್ತಾ, ಮಿಂಚಿನ ವೇಗದಲ್ಲಿ ವಿಷಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು. ನನಗೋ ಅವರುಗಳ ಒಂದೂ ಸಂಜ್ಞೆಗಳು ಅರ್ಥ ಆಗದೆ, ಕಣ್ಣು ಬಾಯಿ ಬಿಟ್ಟು ನೋಡತೊಡಗಿದ್ದೆ. ಏನಾದೊಂದು ಅರ್ಥವಾಗಬಹುದೇನೋ ಅಂತ ಸೂಕ್ಷ್ಮವಾಗಿ ಅವರ ಹಾವಭಾವಗಳನ್ನು ಗಮನಿಸಿದೆ. ಊಹ್ಞೂಂ ಅವರ ನಗು ಬಿಟ್ಟರೆ ಇನ್ನೇನೂ ಅರ್ಥ ಆಗಲಿಲ್ಲ. ಆ ಕ್ಷಣಕ್ಕೆ ನಮ್ಮಲ್ಲಿಲ್ಲದ ಯಾವುದೋ ವಿಶೇಷ ಶಕ್ತಿ ಅವರಲ್ಲಿದೆ ಅನಿಸಿತ್ತು. ಅವರಿಂದ ಮಾತು ಕಿತ್ತುಕೊಂಡ ದೇವರು ಅದಕ್ಕೆ ಪರ್ಯಾಯವಾಗಿ ಈ ಶಕ್ತಿಯ ಕೊಟ್ಟಿರಬೇಕೆನೋ. ಅವರುಗಳ ಸಂಭಾಷಣೆಯನ್ನು ನೋಡಿದಾಗಲೇ ಅನಿಸಿದ್ದು, ಮನಸಿನ ಮಾತು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಮಾತೇ ಬೇಕೆಂದೇನಿಲ್ಲ,ಅರ್ಥ ಮಾಡಿಕೊಳ್ಳುವ  ಮನಸು ಹಾಗೂ ಕುಶಲತೆ ಇದ್ದರೆ ಸಾಕು.

http://oranltd.com/650-word-essay/ ಅದೇ ವಾರದಲ್ಲೇ ಮತ್ತಂತಹದ್ದೆ ಅನುಭವ. ಜಯನಗರದ ಸಪ್ನ ಬುಕ್ ಹೌಸ್ ನಿಂದ ಒಂದಷ್ಟು ಪುಸ್ತಕಗಳನ್ನು ಹೊತ್ತು ಐಟಿಪಿಎಲ್ ಬಸ್ ಏರಿದ್ದೆ. ಟಿಕೆಟ್ ಕೊಡಲು ಬಂದ ಕಂಡಕ್ಟರ್

” ಇನ್ಶುರೆನ್ಸ್ ಮಾಡ್ಸಿರೋದು ಎಲ್ಲಮ್ಮ , ನಂಗೂ ಮಾಡ್ಸ್ಬೇಕಿತ್ತು, ಯಾವ್ದಾದ್ರೂ ಒಳ್ಳೆ ಏಜೆಂಟ್ ಇದ್ದ್ರೆ ನಂಗೂ ಹೇಳು” ಅಂತ ಒಂದೇ ಸಮನೆ ಪ್ರಶ್ನೆ ಮಾಡೋಕೆ ಶುರುವಿಟ್ಟಿದ್ದ. ನಾನು ತಲೆಬುಡ ಅರ್ಥವಾಗದೆ, “ನಾನ್ಯಾವ ಇನ್ಶುರೆನ್ಸ್ ಮಾಡ್ಸಿಲ್ಲ ಸರ್” ಅಂದೆ. ಅದಕ್ಕವರು “ಅಲ್ಲಮ್ಮ ನೀನು ಬಸ್ ಹತ್ತೋವಾಗ ನಿನ್ ಕೈಲಿ ಬಿಲ್ ನೋಡ್ದೆ ಅದ್ಕೆ ಕೇಳ್ದೆ” ಅಂದ್ರು. ಅಯ್ಯೊ ಸರ್ ಅದು ಇನ್ಶುರೆನ್ಸ್ ಬಿಲ್ ಅಲ್ಲ, ಸಪ್ನ ಬುಕ್ ಹೌಸ್ ದು ” ಅಂತಂದು, ಬ್ಯಾಗ್ ನಿಂದ ಬಿಲ್ ತೆಗೆದು ಅವರ ಕೈಗಿತ್ತೆ. “ಇಷ್ಟೊಂದು ಬುಕ್ಸ್ ತಗೊಂಡಿದಿಯಲ್ಲಮ್ಮ ಆರ್ಟ್ಸ್ ಸ್ಟುಡೆಂಟಾ ? ” ಅಂತ ಕೇಳಿದ್ರು ಬಿಲ್ ಮೇಲೆ ಕಣ್ಣಾಡಿಸುತ್ತಾ.. “ಇಲ್ಲ ಸರ್,  ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲ್ಸ ಮಾಡ್ತಿದೀನಿ, ಓದೋ ಗೀಳಿದೆ,ಮನೆಲಿ ಚಿಕ್ಕದೊಂದು ಲೈಬ್ರರಿ ಮಾಡೋ ಆಸೆ” ಎಂದು ನಕ್ಕೆ. “ಒಳ್ಳೆ ಅಭ್ಯಾಸ, ಮಾಡಿ ಮಾಡಿ,  ನಮ್ಮ ಕಾಲಕ್ಕೆ ಹೋಲಿಸಿದ್ರೆ, ಈಗ ಓದೋವ್ರು  ಕಮ್ಮಿ ಆಗ್ಬಿಟ್ಟಿದಾರೆ” ಅನ್ನುತ್ತಾ  ಬಿಲ್ ಕೈಗಿತ್ತು ಊರು, ಕೆಲಸ ಮಾಡುತ್ತಿರೊ ಕಂಪೆನಿ ಅದು ಇದು ಅಂತ ಒಂದಿಷ್ಟು ವಿಚಾರಿಸಿ,  ಅವರ ಕೆಲಸ ಮುಂದುವರಿಸಿದ್ದರು. ನಾನು ಕೈಗೆ ಸಿಕ್ಕ ಯಾವುದೋ ಕಾದಂಬರಿ ಹಿಡಿದು ಓದತೊಡಗಿದೆ. ಇನ್ನೇನು ೪ ಸಾಲು ಓದಿರಬೇಕು ಅಷ್ಟೆ, ಯಾರೋ ಹಿಂದುಗಡೆಯಿಂದ ಭುಜದ ಮೇಲೆ ಕೈ ಇಟ್ಟಂತಾಗಿ ಸ್ವಲ್ಪ ಭಯದಿಂದಲೇ ತಿರುಗಿ ನೋಡಿದೆ. ಸುಮಾರು ಎಂಟು ವರ್ಷದ ಹುಡುಗಿ. ಹಿಂದುಗಡೆ ಸೀಟಿನಿಂದ ಕತ್ತು ಮುಂದೆ ಮಾಡಿ ಇಣುಕುತ್ತಿದ್ದವಳಿಗೆ “ಹೆಸ್ರೇನು ಪುಟ್ಟ ನಿಂದು ?” ಅಂತ ಕೇಳಿದೆ. ಏನೂ ಉತ್ತರಿಸದೆ ಪಕ್ಕದಲ್ಲೇ ಕೂತಿದ್ದ ಅಮ್ಮನ ಮುಖ ನೋಡಿದಳು. “ಮಾತು ಬರಲ್ಲಮ್ಮ ಅವಳಿಗೆ, ಮೊನ್ನೆವರೆಗೂ ಚೆನ್ನಾಗೆ ಮಾತನಾಡಿಕೊಂಡಿದ್ದವಳು. ಅದೇನಾಯ್ತೋ ಗೊತ್ತಿಲ್ಲ, ಹೋದ ತಿಂಗಳಿನಿಂದ ತೊದಲೋಕೆ ಶುರು ಮಾಡಿ, ಈಗ ಮಾತೇ ಆಡುತ್ತಿಲ್ಲ ಅಂದರು ಬೇಸರದಲ್ಲೆ” .ಅಯ್ಯೋ ಅನಿಸಿತು. “ಒಳ್ಳೆ ಡಾಕ್ಟರ್ ಹತ್ತಿರ ತೋರಿಸಿ ಆಂಟಿ, ಸರಿ ಹೋಗ್ತಾಳೆ ಹೆದ್ರ್ಕೋಬೇಡಿ” ಅಂತ ಇಲ್ಲಿ ಬಾ ಎಂದು ನನ್ನ ಪಕ್ಕದಲ್ಲಿ ಕೂರಿಸಿಕೊಂಡೆ.  ನಗುತ್ತಲೇ ಬಂದು ಕೂತವಳ ಕಣ್ಣುಗಳು ನನ್ಕೈಯಲ್ಲಿದ್ದ ಪುಸ್ತಕದ ಮೇಲೆ ನೆಟ್ಟಿದ್ದವು. ಬುಕ್ ಬೇಕಾ ಅಂತ ಕೇಳಿದ್ದಕ್ಕೆ ಹೌದು ಎನ್ನುವಂತೆ ತಲೆ ಆಡಿಸಿದಳು. ಬ್ಯಾಗ್ ನಿಂದ ಅಣ್ಣನ ಮಕ್ಕಳಿಗೆಂದು ಕೊಂಡು ತಂದಿದ್ದ ಒಂದೆರಡು ಪಂಚತಂತ್ರ ಕಥೆಗಳ ಪುಸ್ತಕಗಳನ್ನು ತೆಗೆದು ಕೈಗಿತ್ತೆ. ಕೊಡುವುದನ್ನೆ ಕಾಯುತ್ತಿದ್ದವಳು ಚಕ್ಕನೆ ಎತ್ತಿಕೊಂಡು ಒಂದನ್ನು ತೆಗೆದು ಪುಟ ತಿರುವ ತೊಡಗಿದಳು. ಹಾಗೆ ಅವಳ ತಾಯಿಯ ಜೊತೆ ಮಾತಾಡುತ್ತಾ ಕುಳಿತೆ. “ತುಂಬ ದಿನದಿಂದ ಮಂಕಾಗಿ ಕುಳಿತಿದ್ದವಳು ಇವತ್ತೇ ಕಣಮ್ಮ ಖುಶಿಯಾಗಿರೋದು. ಅಕ್ಕಪಕ್ಕದ ಮಕ್ಕಳ ಜೊತೆಗೂ ಆಟ ಆಡೋಕೆ ಹೋಗಲ್ಲ” ಅಂತಂದ್ರು. ಅಷ್ಟರಲ್ಲೆ ಅವರು ಇಳಿಯಬೇಕಾದ ಜಾಗ ಬಂತು. ಹುಡುಗಿ ತನ್ನ ಕೈಯಲ್ಲಿದ್ದ ಪುಸ್ತಕಗಳನ್ನು ವಾಪಾಸು ಕೊಡಲು ನನ್ನತ್ತ ಚಾಚಿದಳು.” ನೀನೇ ಇಟ್ಕೊ ಪುಟ್ಟ ನಿಂಗಂತನೇ ಕೊಟ್ಟಿದ್ದು ” ಅಂತಂದೆ. ಅವಳ ಮುಖ ಅರಳಿತು. ಬ್ಯಾಗ್ ನಿಂದ ಇನ್ನೆರಡು ಪುಸ್ತಕಗಳನ್ನು ತೆಗೆದು ಅವಳ ಕೈಗಿತ್ತು ಇದನ್ನೂ ಓದು ಅಂತ ಕೆನ್ನೆ ಹಿಂಡಿ ಬಾಯ್ ಹೇಳಿದೆ. ನಗುತ್ತಲೇ ಟಾ ಟಾ ಮಾಡುತ್ತಾ ಅಮ್ಮನ ಜೊತೆ ನಡೆದವಳು ಬಾಗಿಲ ಬಳಿ ನಿಂತು ಮತ್ತೆ ಕೈ ಬೀಸಿದಳು.ಇಳಿದ ಮೇಲೂ ಕೈ ಬೀಸಿ ಟಾ ಟಾ ಮಾಡುತ್ತಲೇ ಇದ್ದಳು, ಕಣ್ಣಿಂದ  ಮರೆಯಾಗುವವರೆಗೂ.ಮುಂದಿನ ಸ್ಟಾಪ್ ನಲ್ಲಿ ನಾನೂ ಇಳಿದು ನನ್ನ ಗೂಡು ಸೇರಿಕೊಂಡೆ. ಆವತ್ತು ರಾತ್ರಿಯಿಡಿ ಪುಟ್ಟ ಹುಡುಗಿಯ ಮುಖವೇ  ಕಣ್ಣ ಮುಂದೆ. ಕನಸಿನಲ್ಲಿ ಆಕೆ ಮಾತನಾಡಿದಂತೆ,  ಮತ್ತೆ ಇನ್ನೊಂದು ಪ್ರಯಾಣದಲ್ಲಿ ಪುನಃ ಸಿಕ್ಕಂತೆ.ಇದಾಗಿ ತಿಂಗಳುಗಳೆ ಕಳೆದಿವೆ. ಈಗ ಮಾತನಾಡುತ್ತಿರಬಹುದೆ? ಛೇ ಫೋನ್ ನಂಬರ್ ಆದ್ರೂ ತಗೋಬೇಕಿತ್ತು ಅನಿಸಿದ್ದಿದೆ ಎಷ್ಟೋ ಬಾರಿ. ಪ್ರಯಾಣ ಮಧ್ಯೆ ಸಿಕ್ಕ ಇಂತ ಅದೆಷ್ಟೋ ಪಾತ್ರಗಳು ಮರೆತು ಮತ್ತೆ ನೆನಪಾಗುತ್ತಲೇ ಇರುತ್ತವೆ.

source url ನಾನೇರಿದ್ದ ವೋಲ್ವೋ  ಬಸ್ಸು ಸ್ವಲ್ಪ ಹೊತ್ತಿಗೆ ಮೆಜೆಸ್ಟಿಕ್  ತಲುಪಲಿತ್ತು , ಮುಂದೆ ಕೂತಿದ್ದ ತಾಯಿ ಮಗು ಇನ್ನೂ ತಮ್ಮ ಮನಸಿನ ಮಾತು ಹಂಚಿಕೊಳ್ಳುತ್ತಲೇ ಇದ್ದರು. ಮನಸಿನ ಮೂಲೆಯಲ್ಲೆಲ್ಲೋ ಟೋಟಲ್ ಮಾಲ್  ನ ಕೆಎಫ್ ಸಿ ನಲ್ಲಿ ನಿಂತು ನಗುವಿನಲ್ಲೇ ಗ್ರಾಹಕರನ್ನು ಸೆಳೆದು ಕೈಸನ್ನೆಯಲ್ಲೇ ಮಾತನಾಡಿಸಿ ಆರ್ಡರ್ ತೆಗೆದುಕೊಳ್ಳುತ್ತಿದ್ದ ಕೌಂಟರ್ ಹುಡುಗ, ಇನ್ಯಾವತ್ತೋ ಬಸ್ಸಲ್ಲಿ ಮತ್ತದೆ ಮೂಕಭಾಷೆಯಲ್ಲಿ ದೂರದಲ್ಲೆಲ್ಲೋ ಕೂತಿದ್ದ ತನ್ನ ಗೆಳೆಯನ ಜೊತೆ ಮನಸಿನ ಮಾತು ಹಂಚಿಕೊಳ್ಳುತ್ತಿದ್ದ ಬಟ್ಟಲು ಕಂಗಳ ಚೆಲುವೆ, ಆಫೀಸ್ ಬಿಟ್ಟು ಬೇಗ ಬಂದ ದಿನಗಳಲ್ಲಿ ಕಷ್ಟಪಟ್ಟು ಅಕ್ಕಾ ಎಂದು ಕರೆಯುತ್ತಾ , ಮುಂದಕ್ಕೇನು ಹೇಳಲಾಗದೆ ಆಟಕ್ಕೆ ಬಾ ಎನ್ನುವಂತೆ ಕೈ ಹಿಡಿದು ಕರೆದೊಯ್ಯುತ್ತಿದ್ದ ಆರರ ವಯಸ್ಸಿನ ಪಕ್ಕದ ಮನೆ ಹುಡುಗಿ ಎಲ್ಲರೂ ಹಿತವಾಗಿ ಕಾಡತೊಡಗಿದರು.

One thought on “ಮೌನದೊಡಲಿನ ಮಾತು

Leave a Reply

here

go here

Top