You are here
Home > ವೇದವಾಕ್ಯ > ಸಂವೇದನಾ

ಸಂವೇದನಾ

ಅವನು ಮತ್ತೆ ಕಾಡುತ್ತಿದ್ದಾನೆ. ಮರೆತೆನು ಅಂದುಕೊಳ್ಳುವಷ್ಟರಲ್ಲಿ ಮತ್ತೆ ನೆನಪಾಗುತ್ತಾನೆ. ಎಷ್ಟೆಂದರೆ ಒಂದೊಂದು ಸಲ ಕಣ್ಣು ಮುಚ್ಚಿದರೂ, ಕಣ್ಣು ತೆರೆದರೂ, ಕನಸಲ್ಲೂ….!! ಅವನ ನೆನೆದರೆ ಒಮ್ಮೊಮ್ಮೆ ಮನಸು ಮರುಗುತ್ತದೆ. ಇನ್ನೊಮ್ಮೆ ಹೆಮ್ಮೆಯಿಂದ ನಲಿದಾಡುತ್ತದೆ… ಅಗೋ ಅಲ್ಲಿ ವಿಜಯ ಪತಾಕೆ ಹಿಡಿದು ನಲಿಯುತ್ತಿದ್ದಾನೆ. ಹ್ಞಾಂ… ಆತನೇ….!! ಆತನೇ…! ನಮ್ಮ ಹೆಮ್ಮೆಯ ಸೈನಿಕ.. ಗಡಿ ಕಾಯೋ ನಾಯಕ. ತಾಯ್ನೆಲದ ಋಣವನ್ನು ಪರಿಪೂರ್ಣವಾಗಿ ತೀರಿಸುವ ಏಕೈಕ ವ್ಯಕ್ತಿ…! ಅವನು ಹಿಮಾಲಯಕ್ಕೂ ಎತ್ತರ… ಸಾಗರಕ್ಕೂ ವಿಶಾಲ…!! ನೆಲ, ಜಲ, ಆಕಾಶವನ್ನೂ ಆಕ್ರಮಿಸಿ ಬೆಳೆವ ವಿಶ್ವರೂಪಿ, ಸರ್ವಾಂತರ್ಯಾಮಿಯಂತೆ… ದೇವರಂದರೆ ತಪ್ಪಲ್ಲ. ಅಲ್ಲೆಲ್ಲೋ ಅಟ್ಟಹಾಸಗೈದು ವೈರಿಗಳ ಸದೆಬಡಿದು ವಿಜಯ ಪತಾಕೆಯ ಹಾರಿಸುತ್ತಾನೆ. ಇನ್ನೆಲ್ಲೋ ವೈರಿಗಳನ್ನು ನೆಲಕ್ಕುರುಳಿಸುತ್ತಾ, ಅವರ ಬಂದೂಕಿನಿಂದ ಹೊರಟ ಕಾಡತೂಸುಗಳನ್ನು ಎದೆಯೊಳಗೆ ಇಳಿಸಿಕೊಳ್ಳುತ್ತಾ ಹುತಾತ್ಮನಾಗುತ್ತಾನೆ, ತನ್ಮೂಲಕ ಮತ್ತೊಂದು ವಿಜಯಕ್ಕೆ ನಾಂದಿ ಹಾಡುತ್ತಾನೆ. ಅದು ಅವನ ಕ್ಷಾತ್ರತೇಜತೆ…!! ಹೋರಾಡುತ್ತಾ ವೀರಮರಣನ್ನಪ್ಪುತ್ತಾನೆ. ಮತ್ತೆ ಇನ್ಯಾವುದೋ ಮಹಾಮಾತೆಯ ಹೊಟ್ಟೆಯಲ್ಲಿ ಹುಟ್ಟಿ ಬರುತ್ತಾನೆ. ಧನ್ಯರು ಆ ತಾಯಂದಿರು…!

follow link ನಾವಿಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದರೆ, ಅವನದಲ್ಲಿ ಚಳಿಯ ಜೊತೆಗಿನ ಹೋರಾಟ. ಹೆತ್ತವರದೋ, ಹೆಂಡತಿ ಮಕ್ಕಳದ್ದೋ, ಗೆಳತಿಯದ್ದೋ ನೆನಪುಗಳ ಜೊತೆಗೆ, ಆಗೊಮ್ಮೆ ಈಗೊಮ್ಮೆ ಕಿವಿಗಪ್ಪಳಿಸುವ ಗುಂಡಿನ ಸದ್ದಿನ ನಡುವೆ ಅವನ ಜೀವನ. ಹಬ್ಬ ಹರಿದಿನಗಳು ಅವನ ಕ್ಯಾಲೆಂಡರ್ ನಲ್ಲೇ ಇಲ್ಲ. ಕರ್ತವ್ಯದ ಕರೆ ಬಂತೆಂದರೆ ಅರ್ಧ ನಿದ್ದೆಯಲ್ಲೂ ಎದ್ದು ಓಡುವ. ತನ್ನ ಕರ್ಮಭೂಮಿಯಲ್ಲಿ ದಿನಗಟ್ಟಲೆ ಹಸಿವು ಕಟ್ಟಿಕೊಂಡು ಹೋರಾಡುವ. ಹೊರಡುವ ಮುನ್ನ ಸಹ ಸೈನಿಕ ಗೆಳೆಯರು ಒಬ್ಬರಿಗೊಬ್ಬರು ಹರಸಿ ನೀಡುವ ಆತ್ಮೀಯ ಅಪ್ಪುಗೆ ಮತ್ತೆ ಸಿಗುತ್ತದೋ ಇಲ್ಲವೋ, ಮತ್ತೆ ಒಬ್ಬರನ್ನೊಬ್ಬರು ಜೀವಂತವಾಗಿ ನೋಡುತ್ತೀವೋ ಇಲ್ಲವೋ… ಹೀಗೆ ತನ್ನೆಲ್ಲ ಭಾವುಕತೆಗಳನ್ನು ಅದುಮಿಟ್ಟುಕೊಂಡು, ಬಂದೂಕು ಹೆಗಲಿಗೇರಿಸಿಕೊಂಡು ಹೊರಡುತ್ತಾನೆ. ಕೊರಕಲು ಹಿಮದ ಗುಡ್ಡ, ನದಿಯ ತೀರ , ಮತ್ತೆಲ್ಲೋ… ಹಗಲು ರಾತ್ರಿ ಎನ್ನದೆ ಅವನ ಬೇಟೆ.

ಇಂಡಿಯಾ ಗೇಟ್ (ಮೊದಲ ಮಹಾಯುದ್ಧದಲ್ಲಿ ವೀರಗತಿ ಹೊಂದಿದ ಭಾರತೀಯ ಸೈನಿಕರ ಸ್ಮಾರಕ) ನಿಂದ ಹಿಡಿದು ಕಾರ್ಗಿಲ್ ಹುತಾತ್ಮರ ಸ್ಮಾರಕದವರೆಗೂ ಆತ ನೆನಪುಗಳೊಂದಿಗೆ ತಣ್ಣಗೆ ಉಸಿರಾಡುತ್ತಿದ್ದಾನೆ. ಎಲ್ಲೋ ಕೇಳುವ ಜೈ ಹಿಂದ್ ಗೆ ಸಮಾಧಿಯೊಳಗೆ ಬೆಚ್ಚಗೆ ಮಲಗಿದ್ದವ ಒಮ್ಮೆ ಮೈ ಕೊಡವಿ, ಮಗ್ಗಲು ಬದಲಾಯಿಸುತ್ತಾನೆ. ಮಾರ್ಬಲ್ಸ್ ನ ಮೇಲಿನ ಅಮರರಾದವರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿ ಹೆಮ್ಮೆಪಡುತ್ತಾನೆ. ದೇಶಪ್ರೇಮಿಗಳ ಎದೆಯಲ್ಲಿ ಸ್ಥಾಯಿಯಾಗಿ ಉಳಿಯುತ್ತಾನೆ. ಇನ್ಯಾವುದೋ ರೂಪ ಧರಿಸಿ ಮತ್ತೆ ಕಾಲಿಡುತ್ತಾನೆ ಭರತಭೂಮಿಗೆ…

follow link ಆತ ಕ್ಯಾಪ್ಟನ್ ವಿಕ್ರಮ್ ಭಾತ್ರಾ, ಆತ ಮನೋಜ್ ಕುಮಾರ್ ಪಾಂಡೆ, ಆತ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್, ಆತ ಯೋಗೇಂದ್ರ ಸಿಂಗ್ ಯಾದವ್, ಆತ ರೈಫಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್, ಆತ ಕ್ಯಾಪ್ಟನ್ ಅನುಜ್ ನಾಯರ್, ಆತ ಸಂದೀಪ್ ಉನ್ನಿಕೃಷ್ಣನ್, ಆತ ಸಂಜಯ್ ಕುಮಾರ್, ಆತ ಸೌರಭ್ ಕಾಲಿಯಾ… ಹೀಗೆ ಹೆಸರಿಸಹೋದರೆ ಸಹಸ್ರನಾಮಗಳು ಅವನಿಗೆ.

1962 ರ ಇಸವಿ, ಸ್ವತಂತ್ರ ಭಾರತ ಬ್ರಿಟಿಷರ ಹೊಡೆತ, ವಿಭಜನೆ ಇವುಗಳಿಂದ ಇನ್ನೂ ಚೇತರಿಸಿಕೊಳ್ಳುತಿತ್ತು. ಸಮಯ ಸಾಧಿಸಿ, ಚೀನಾ ಬೆನ್ನಿಗೆ ಚೂರಿ ಹಾಕಲು ಮುಂದಾಗಿತ್ತು. ಶಸ್ತಾಸ್ತೃಗಳ ಕೊರತೆ, ರಾಜಕೀಯ ಧುರೀಣರ ಕಣ್ಣಾಮುಚ್ಚಾಲೆಯ ನಡುವೆ ನಮ್ಮ ಸೈನಿಕ ಚೀನಾದ ಕೈಯಲ್ಲಿ ಛಿದ್ರ ಛಿದ್ರವಾಗಿ ಹೋಗಿದ್ದ ಅಂದು. ಕಣ್ಣೆದುರೆ ಶತ್ರು , ಕೈಯಲ್ಲಿ ಬಂದೂಕು ಎಲ್ಲವಿದ್ದೂ , ಫಯರ್ ಮಾಡುವ ಹಾಗಿರಲಿಲ್ಲ ದಿಲ್ಲಿಯಲ್ಲಿ ಬೆಚ್ಚಗೆ ಕುಳಿತ ಸಾರ್ವಭೌಮರ ಅನುಮತಿ ಇಲ್ಲದೆ…!! ಎಂತಹ ವಿಪರ್ಯಾಸ…! ಅಂದು ನಡೆದ ನಮ್ಮ ಸೈನಿಕನ ಕೊಲೆಗೆ ಬರೀ ಚೀನಾ ಮಾತ್ರವಲ್ಲ, ಭಾರತ ಸರ್ಕಾರವೂ ಕಾರಣವಾಗಿತ್ತು. ಅಷ್ಟಕ್ಕೂ ನಮ್ಮ ಸೈನಿಕನ ಜೊತೆ ಕಳುಹಿಸಿದ್ದು 10,000 ಜೊತೆಗಾರರನ್ನು, ಚೀನಾದ 80,000 ಸೈನಿಕರನ್ನು ಎದುರಿಸೋಕೆ…!! ಅದೂ ಪರಿಮಿತ ಅಸ್ತ್ರ ಗಳೊಂದಿಗೆ. ಅಂದು ಮಾತ್ರ ನಮ್ಮ ಸೈನಿಕ ಹೀನಾಯವಾಗಿ ಸೋತಿದ್ದ. ಅದೇ ಕೊನೆ. ಮುಂದಿನದೆಲ್ಲ ವಿಜಯಗಾಥೆ. ಆತ ಎಷ್ಟೋ ಸಲ ಸತ್ತ, ಎಷ್ಟೋ ಸಲ ಬದುಕಿದ. ಆದರೆ ಸೋತಿದ್ದಿಲ್ಲ. ಎಷ್ಟೋ ಸಲ ಕೈ ಕಾಲು ಕಳೆದುಕೊಂಡ, ವೀರಾವೇಶದಿಂದ ಹೋರಾಡಿ ಪ್ರಾಣ ತೆತ್ತ, ಚಂದನೆ ಕಾಣುವ ಹಿಮಾಲಯದ ಮಡಿಲಲ್ಲಿ ಚೆಲ್ಲಾಡಿದ ರಕ್ತ ಹೆಪ್ಪುಗಟ್ಟಿತೋ, ಇಲ್ಲಾ ಹಿಮದ ಜೊತೆ ಕರಗಿ ನೀರಾಗಿ ಹರಿಯಿತೋ? ಆದರೆ ತಿರಂಗ ಮಾತ್ರ ಹಾರಾಡುತ್ತಲೇ ಇದೆ, ಅವನಿಂದಲೇ… ಅವನಿಗೆ ಅನ್ವರ್ಥ ಪರಮವೀರಚಕ್ರ, ಅವನಿಗೆ ಉಪಮೇಯ ಮಹಾವೀರ ಚಕ್ರ. ಅಗೋ ತಿರಂಗ ಹಿಡಿದು ಹಾಡುತ್ತಾ ನಿಂತಿದ್ದಾನೆ,

” ಭಾರತ್ ಮಾತಾ ತೇರೀ ಕಸಮ್,

go site ತೇರೆ ರಕ್ಷಕ್ ರಹೇಂಗೆ ಹಮ್,

follow site ವಂದೇ ಮಾತರಂ

ವಂದೇ ಮಾತರಂ… “

Leave a Reply

Top