You are here
Home > (ಚದು) ರಂಗ > ಸ್ವರ್ಗದ ಬಾಗಿಲು ತೆರೆದಾಗ – ಸಂಧ್ಯಾ ಕೋಟೇಶ್ವರ

ಸ್ವರ್ಗದ ಬಾಗಿಲು ತೆರೆದಾಗ – ಸಂಧ್ಯಾ ಕೋಟೇಶ್ವರ

view ಓದುಗರೇ,

ನಾನೀಗ ನಿಮಗೆ ತೋರಿಸಹೊರಟಿರುವ ಜಾಗ ‘ಭೋಲೋಕದ ಸ್ವರ್ಗ’. ಧಾರವಾಡದಿಂದ ಸುಮಾರು 150 ಕಿ.ಮೀ. ದೂರದಲ್ಲಿ ದಕ್ಷಿಣ ಮಹಾರಾಷ್ಟ್ರದಲ್ಲಿರುವ ಪ್ರದೇಶ. ನಾವು ವಾಸಿಸುವ ವಾತಾವರಣಕ್ಕಿಂತ ಒಂದು ಭಿನ್ನ ಲೋಕವನ್ನೇ ಸೃಷ್ಠಿ ಮಾಡುವ ರಮ್ಯ ಜಾದೂ ‘ಅಂಬೋಲಿ’. ಇಂತಹ ಜಾಗಗಳಿಗೆ ಬೈಕ್ ಸವಾರಿಯೇ ಸೂಕ್ತ. ಬೈಕ್ ಸವಾರಿ ಎಂದರೆ ಅಗತ್ಯತೆ ಪೂರೈಸುವ ಸಂಚಾರದ ಹೊರಗಾಗಿ ಉತ್ಕಟ ಅಪೇಕ್ಷೆ, ಅಭಿಲಾಷೆಗಳಿಂದ ಉದ್ದ ಮಲಗಿರುವ ಹಾದಿಯಲ್ಲಿ ನಮ್ಮ ಸಹಿ ಹಾಕುತ್ತಾ ಸಾಗುವುದು.

go to link ರಸ್ತೆ ಸವಾರಿ ಅಂದರೆ ಸುತ್ತಲಿನ ಪರಿಸರವನ್ನು ಗಮನಿಸುವುದು, ಮೆಚ್ಚುವುದು, ಊರಿಂದ ಊರಿಗೆ ಬದಲಾಗುವ ಮನೆಗಳ ಶೈಲಿ, ದೇವಸ್ಥಾನಗಳ ಅಲಂಕಾರಗಳು, ಕಟ್ಟಡಗಳ ವಿನ್ಯಾಸ ಹಾಗೂ ಬದಲಾಗುವ ಜನಜೀವನವನ್ನು ಅರ್ಥೈಸಿಕೊಳ್ಳುವುದು. ನೆನಪಿನಲ್ಲಿ ಉಳಿಯದಿದ್ದರೂ, ಪ್ರತಿ ಹೊಸ ಊರು ದಾಟಿದಾಗಲೂ ‘ಯಾರ್ ಮಾರ್ರೆ ಈ ಊರಿಗೆ ಹಿಂಗ್ ಹೆಸರ್ ಇಟ್ಟದ್ದ್’ ಎಂದು ಯೋಚಿಸುವುದು. ಹೀಗೇ ಪ್ರಯಾಣ ಮುಂದುವರಿಯುತ್ತದೆ. ಸುಡುವಷ್ಟಲ್ಲದಿದ್ದರೂ ಹದವಾದ ಬಿಸಿಲಿರುತ್ತದೆ. ಇನ್ನೇನು 10 ಕಿ.ಮೀ. ದೂರದಲ್ಲಿದೆ ಅನ್ನುವಷ್ಟರಲ್ಲಿ ಧಿಢೀರ್ ಮಳೆ. ಹವಾಮಾನದಲ್ಲಿ ಪೂರ್ಣ ಬದಲಾವಣೆ. ‘ಅಂಬೋಲಿಗೆ ಸ್ವಾಗತ’ ಎಂದು ಅಶರೀರ ವಾಣಿಯೊಂದು ದಿಗಂತದಿಂದ ನಸುನಕ್ಕಂತೆ. ಮುಂದೆ ದಾರಿ ಕಾಣುವುದಿಲ್ಲ. ಆವರಿಸಿದ ದಟ್ಟ ಮಂಜು ಬೇಧಿಸಿ ಮುನ್ನುಗ್ಗಬೇಕು. ಪ್ರಕೃತಿಯ ರಸಿಕತೆಗೆ ಕನ್ನಡಿ ಹಿಡಿಯಲು ಜಿಟಿ ಜಿಟಿ ಮಳೆ. ಹದವಾದ ಚಳಿ. ಅಲ್ಲೇ ಗಾಡಿ ನಿಲ್ಲಿಸಿ, ‘ವೀವ್ ಪಾಯಿಂಟ್’ಗೆ ನಡೆಯುವಾಗ ಸ್ವರ್ಗಕ್ಕೆ ಯಾರೋ ಮೆಟ್ಟಿಲು ಮಾಡಿಟ್ಟ ಪರಿ. ತುತ್ತ ತುದಿಗೆ ಬಂದು ನಿಂತಾಗ ಕಾಣುವುದು ಸುಮಾರು 2,260 ಅಡಿ ಎತ್ತರದಿಂದ ಸುತ್ತಲೂ, ಕೆಳಗೆ, ಮೇಲೆ ಬರಿಯ ಬಿಳಿ ಪರದೆ. ಒಂದಿಂಷ್ಟೂ ಬೇರೇನೂ ಕಾಣದು. ಜೋರಾಗಿ ಗಾಳಿ ಬೀಸಿದಂತೆ ಮಂಜೆಲ್ಲ ಛಿದ್ರವಾಗಿ ಒಂದೆಡೆ ಓಡುತ್ತವೆ. ‘ನಾರದ ವಿಜಯ’, ‘ಜೈ ಹನುಮಾನ್’ , ‘ಶ್ರೀ ಕೃಷ್ಣ’ ದಲ್ಲಿ ತೋರಿಸಿದ ಸ್ವರ್ಗದ ಕಲ್ಪನೆ ಕಣ್ಣಮುಂದೆ ಸಾಕ್ಷ್ಯವಾಗುತ್ತದೆ. “ಸ್ವರ್ಗವೆ ಇಲ್ಲಿದೆ ನಿಸರ್ಗದಲ್ಲಿ; ನೆಮ್ಮದಿ ಮನಸಿನ ಉಲ್ಲಾಸ” ಎಷ್ಟು ಸತ್ಯ! ಸ್ವರ್ಗಕ್ಕೆ ಮೂರೇ ಗೇಣಿದ್ದಂತೆ.

ದಟ್ಟ ಬಯಲ ನಡುವೆಯೂ ಹತ್ತು ಬಗೆಯ ಹಸಿರು. ಅಚ್ಚ ಹಸಿರು, ತಿಳಿ ಹಸಿರು, ಕಡು ಹಸಿರು ಹೀಗೇ. ಕುಳಿತು ಒಂದೊಂದು ಎಲೆಗೆ ಒಂದೊಂದು ಬಗೆಯ ಬಣ್ಣ ಹಚ್ಚಲು ಅದೆಷ್ಟು ತಾಳ್ಮೆ ಇರಬೇಕು ಆತನಿಗೆ! ಕಣ್ಣು ತಲುಪುವ ತನಕವೂ ಕಣ್ಣನ್ನೇ ತಣಿಸುವಷ್ಟು, ದಣಿಸುವಷ್ಟು ಹಸಿರು… ಹಸಿರು…

ಅಲ್ಲಿಂದ ಹೊರಬರುತ್ತಿದ್ದಂತೆ ರಸ್ತೆಯ ಬದಿಯಲ್ಲಿ ಹರಿವ ಝರಿ, ಮೈಚೆಲ್ಲಿ ಕೂರಲೊಂದು ಜಲಪಾತ. ಪೂರ್ಣ ನೆನೆದು ನಡುಗಿ ಬರುತ್ತಿದ್ದರೆ ಬದಿಯಲ್ಲಿ ಬಿಸಿಬಿಸಿ ವಡಾಪಾವ್, ಸಾಬೂದಾನಿ ವಡಾ, ಮುಸುಕಿನ ಜೋಳ ಹಾಗೂ ಖಡಕ್ ಚಾಯ್. ಒಂದು ಜಾಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ವಿಶೇಷ ಹಾಗೂ ಸ್ಥಳೀಯ ಖಾದ್ಯಗಳನ್ನು ಸವಿದರೇನೇ ಆ ಪ್ರಯಾಣಕ್ಕೊಂದು ಸೊಗಡು.

ಈ ಸೀಸನ್ ನಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ವರ್ಗ ಅಂಬೋಲಿ. ಅಲ್ಲಿಂದ 13 ಕಿ.ಮೀ. ದೂರದಲ್ಲಿ ‘ಕವಳಶೇಟ್’. ನಾನು ನಿಮಗೆ ಇಷ್ಟು ಹೊತ್ತು ತೋರಿಸಿದ್ದು ಸ್ವರ್ಗದಿಂದ ಮೂರು ಗೇಣು ದೂರದ ದೃಶ್ಯ. ಈಗ ಸ್ವರ್ಗಕ್ಕೇ ಕಾಲಿಡುವ ಹೊತ್ತು. ‘ಹಿಮಾವೃತ’ , ‘ಹಿಮಚ್ಛಾದಿತ’ ಪರದೆ ಸರಿದರೆ, ಕೆತ್ತಿಟ್ಟಿರುವ ಗುಡ್ಡಗಳು, ಪದರ-ಪದರಗಳಲಿ ಬಿಡಿಸಿಕೊಳ್ಳುವ, ಒಂದೊಂದು ಆಕಾರದಲ್ಲಿರುವ ಬೆಟ್ಟಗಳು, ಅಲ್ಲಿ ಕಾಣಿಸುತ್ತಿರುವ ಜಲಪಾತ ಕೆಳಗೆ ಧುಮುಕುವುದೇ ಇಲ್ಲ. ಗಾಳಿಯ ರಭಸಕ್ಕೆ ನಮ್ಮ ಮುಖದ ಮೇಲೆ ಎರಚುತ್ತದೆ. ಕಣ್ಣು ತಂಪಾಗಿಸುವ ಹಸಿರು. ಎರಡೆರಡು ನಿಮಿಷಕ್ಕೆ ‘ಏನೂ ನಡೆದೇ ಇಲ್ಲವೇನೋ’ ಎಂಬಂತೆ ದಟ್ಟವಾಗಿ ಆವರಿಸಿಕೊಳ್ಳುವ ಮಂಜು. ‘ದೇವರೇ ರುಜು ಮಾಡಿದ’ ‘ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ’ ಸ್ವರ್ಗವೇ ಬಾಗಿಲು ತೆರೆದು ನಿಂತಾಗ ಕಾಲಿಡಲು ನಾವಿಲ್ಲದಿದ್ದರೆ ಹೇಗೇ?

ನನ್ನ ಆತ್ಮೀಯರೊಬ್ಬರು ಹೇಳುತ್ತಾರೆ ‘ಪ್ರಯಾಣ ಅಂದರೆ ನಾಳೆಗಾಗಿ ನೆನಪುಗಳನ್ನು ಸಂಗ್ರಹಿಸುವುದು’. ನಿಜ. ಅದರೊಂದಿಗೆ ಪ್ರಯಾಣ ಅಂದರೆ ಸುತ್ತ ಇರುವ ಪರಿಸರದ ವೈಶಿಷ್ಟ್ಯವನ್ನು, ಭಿನ್ನತೆಯನ್ನು ಅನ್ವೇಷಿಸುವುದು, ಅರ್ಥೈಸಿಕೊಳ್ಳುವುದು, ನಿಸರ್ಗದ ಮೌನವನ್ನು ಗೌರವಿಸುವುದು, ಮರೆಯಲ್ಲಿ ಹಕ್ಕಿ, ಕೀಟಗಳ ಬೃಹತ್ ಜೀವಸಂಕುಲದ ಸ್ವಾಗತಕ್ಕೆ ಓಗೊಡುವುದು, ಒತ್ತೊತ್ತಾಗಿ ಬೆಳೆದ ಕಾಡುಗಳ ಗರ್ಭದೊಳಗಿನ ನಿಗೂಢ ಸ್ವಗತವನ್ನು ಪ್ರಾಂಜಲ ಮನಸ್ಸಿನಿಂದ ಗ್ರಹಿಸುವುದು.

ನಮ್ಮ ಸುತ್ತ ಧೂಳು, ಮಾಲಿನ್ಯ, ಗದ್ದಲ ಎಂದು ಗೊಣಗುವುದು ಸದಾ ಇದ್ದೇ ಇದೆ. ಬಿಡುವಾದಾಗ ಅಥವಾ ಬಿಡುವು ಮಾಡಿಕೊಂಡು ಒಮ್ಮೊಮ್ಮೆಯಾದರೂ, ಯಥೇಚ್ಛವಾಗಿ ನಮಗಾಗಿ ಉಳಿದಿರುವ ನಿಸರ್ಗದ ನೈಜ ಬತ್ತಲು ಸೌಂದರ್ಯವನ್ನು ಹುಡುಕಿಕೊಂಡು ‘ಕಾಗದದ ದೋಣಿಯಲಿ………..’ ಎಂದು ಗುನುಗುತ್ತಾ ಪಯಣಿಸುವಂತಾಗಲಿ 🙂

Leave a Reply

Top